Kannada NewsKarnataka News

ಗೋಕಾಕ, ಅಥಣಿ, ಕಾಗವಾಡ – ಪ್ರತಿಷ್ಠೆಯ ಆಖಾಡ ಸಜ್ಜು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ  ಅ.21 ರಂದು ಉಪ ಚುನಾವಣೆ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸೋಮವಾರ (ಸೆ.23) ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಸೆ.21) ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಚುನಾವಣಾ ಆಯೋಗ ಇಂದು ರಾಜ್ಯದ ಕೆಲವು ಮತಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಿಸಿದ್ದು, ಅದರಂತೆ ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಗೋಕಾಕ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.

 ಸೆ.23ರಿಂದ ನಾಮಪತ್ರ ಸ್ವೀಕಾರ:

ನಾಮಪತ್ರ ಸ್ವೀಕಾರ ಸೆ. 23 ರಿಂದ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಸೆ.30 ಕಡೆಯ ದಿನ.
ನಾಮಪತ್ರಗಳ ಪರಿಶೀಲನೆ ಅ.1 ರಂದು ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್ ಪಡೆಯಲು ಅ.3 ಕಡೆಯ ದಿನವಾಗಿರುತ್ತದೆ.
ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಅ.24 ರಂದು ಮತ ಎಣಿಕೆ ನಡೆಯಲಿದೆ.
ಜಿಲ್ಲೆಯಾದ್ಯಂತ ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಚುನಾವಣಾ ಪ್ರಕ್ರಿಯೆ ಅ.27 ರಂದು ಪೂರ್ಣಗೊಳ್ಳಲಿದೆ ಎಂದು ಡಾ.ಬೊಮ್ಮನಹಳ್ಳಿ ವಿವರಿಸಿದರು.
ಆಯೋಗದ ನಿರ್ದೇಶನದ ಪ್ರಕಾರ ಉಪ ಚುನಾವಣೆಯಲ್ಲಿ ಶೇ.140 ರಷ್ಟು ಬ್ಯಾಲೆಟ್ ಯುನಿಟ್; ಶೇ.130 ರಷ್ಟು ಕಂಟ್ರೋಲ್ ಯುನಿಟ್ ಹಾಗೂ ಶೇ.130ರಷ್ಟು ವಿವಿಪ್ಯಾಟ್ ಗಳನ್ನು ಬಳಕೆ ಮಾಡಲಾಗುವುದು.

ಒಟ್ಟು 6.45 ಲಕ್ಷ ಮತದಾರರು:

ಏಪ್ರಿಲ್ 4, 2019 ಕ್ಕೆ ಅನ್ವಯಿಸುವಂತೆ ಅಥಣಿ, ಕಾಗವಾಡ ಹಾಗೂ ಗೋಕಾಕ ಮತಕ್ಷೇತ್ರಗಳಲ್ಲಿ ಒಟ್ಟಾರೆ 6,45,541 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
03- ಅಥಣಿ ಮತಕ್ಷೇತ್ರದಲ್ಲಿ 2,17,974 ಮತದಾರರು; 04-ಕಾಗವಾಡ ಮತಕ್ಷೇತ್ರದಲ್ಲಿ 1,85,443 ಹಾಗೂ 09- ಗೋಕಾಕ ಮತಕ್ಷೇತ್ರದಲ್ಲಿ 2,42,124 ಮತದಾರರಿದ್ದಾರೆ.
ಅಥಣಿ- 260, ಕಾಗವಾಡ-231 ಹಾಗೂ ಗೋಕಾಕ ಕ್ಷೇತ್ರದಲ್ಲಿ 288 ಸೇರಿದಂತೆ ಮೂರು ಕ್ಷೇತ್ರದಲ್ಲಿ ಒಟ್ಟಾರೆ 779 ಮತಗಟ್ಟೆಗಳನ್ನು ಸ್ಥಾಪಿಸಲಾಗವುದು.

ಹೆಸರು ಸೇರ್ಪಡೆಗೆ ಅವಕಾಶ:

ನಾಮಪತ್ರ ಸ್ವೀಕಾರದ ಕಡೆಯ ದಿನದವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅವಕಾಶವಿರುತ್ತದೆ ಎಂದು ವಿವರಿಸಿದರು.
ಮಾದರಿ ನೀತಿ ಸಂಹಿತೆ ಜಾರಿಗೆ ವಿವಿಧ ತಂಡಗಳನ್ನು ರಚಿಸಲಾಗಿದ್ದು, ತಕ್ಷಣದಿಂದಲೇ ಕಾರ್ಯಪ್ರವೃತ್ತಗೊಳ್ಳಲಿವೆ. ಮತದಾನ ಸಾಮಗ್ರಿ, ಸಿಬ್ಬಂದಿ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗೆ ಅಗತ್ಯವಿರುವ ಎಲ್ಲ  ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ ಮತಗಟ್ಟೆಗೆ ನಾಲ್ಕು ಸಿಬ್ಬಂದಿಯಂತೆ ನಿಯೋಜಿಸಲಾಗುವುದು.
ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವೊಂದು ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗುವುದು ಎಂದರು.
ಶಾಲೆಗಳಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಶಾಲೆಗಳನ್ನು ಮತಗಟ್ಟೆಯಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ‌ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಲಕ್ಷ್ಮಣ ಅರಸಿದ್ದಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button