
ಪ್ರಗತಿವಾಹಿನಿ ಸುದ್ದಿ: “ಈ ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನೀವು (ಮಾಧ್ಯಮಗಳು) ಆತುರದಲ್ಲಿದ್ದೀರಿ” ಎಂದು ತಿಳಿಸಿದರು.
ದೆಹಲಿಯಲ್ಲಿ ಸಂಸದರ ಜೊತೆಗಿನ ಸಭೆ ಬಗ್ಗೆ ಕೇಳಿದಾಗ, “ಇಂದು ನಮ್ಮ ಸಂಸತ್ ಸದಸ್ಯರನ್ನು ಭೇಟಿ ಮಾಡುತ್ತಿದ್ದು, ಅವರಿಗೆ ರಾಜ್ಯದ ಬರ ಪರಿಸ್ಥಿತಿ, ನೀರಿನ ಪರಿಸ್ಥಿತಿ, ಕಾವೇರಿ, ಮಹದಾಯಿ, ಮೇಕೆದಾಟು, ಕೃಷ್ಣ ಸೇರಿದಂತೆ ಅನೇಕ ನೀರಾವರಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ” ಎಂದರು.
“ನಾನು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಯಾವ ವಿಚಾರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಸಂಸದರಿಗೆ ಮನವಿ ಮಾಡಲು ಹೋಗುತ್ತಿದ್ದೇನೆ. ನಂತರ ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ರಾಜ್ಯದ ಹಿರಿಯ ನಾಯಕರ ಜೊತೆಗೂ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುವುದು” ಎಂದು ತಿಳಿಸಿದರು.



