ಜಯಶ್ರೀ ಜೆ. ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು
ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ ಮನಸ್ಸುಗಳು ಸಹ ಗದ್ದಲ ಗೋಜಲಿನಲ್ಲೇ ದಿನಗಳನ್ನು ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಏನೂ ಕೆಲಸ ಮಾಡದಿದ್ದರೂ ದಣಿವು ಕಾಡುತ್ತದೆ.ಅಂತಹ ದೇಹಕ್ಕೆ ಒಂದೇ ಒಂದು ಸಣ್ಣ ದನಿ ಕೇಳಿದರೂ ರೇಜಿಗೇಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮನೆಯಿಂದ ದೂರ ಇರುವವರು, ಬೇರೆ ಊರಿನಲ್ಲಿ ಕೆಲಸ ನಿರ್ವಹಿಸುವವರು ಪುಟ್ಟ ಬೀಜದ ಮೊಳಕೆಯಂತೆ ಹೊಸ ಆಸೆಯನ್ನು ಹೊತ್ತು ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಇಲ್ಲವೇ ವಾರಾಂತ್ಯಕ್ಕ್ಲೆ ಬಂದು ಮನೆಯವರೊಂದಿಗೆ ಕಾಲ ಕಳೆಯುವ ವಾಡಿಕೆ ಹಲವರದು. ಇದಕ್ಕೆ ಸಂತೋಷದಿಂದ ಕೈ ಜೋಡಿಸುವ ಜೋಡಿಗಳು ಜೊತೆ ಜೊತೆಯಲಿ ಕಾಲ ಕಳೆಯಬೇಕೆನ್ನುವ ಬಯಕೆ ಮನದಲ್ಲಿದ್ದರೂ ಒತ್ತಡದಿಂದಾಗಿ ಬಯಕೆ ಕೈಗೂಡುವುದು ಕಡಿಮೆಯೇ ಅನ್ನಿ.
ಕೈತುಂಬ ಹಣ ಎಣಿಸುವ ಹಲವಾರು ಜನರ ಬದುಕು ಭಿನ್ನವಾಗಿಲ್ಲ. ಆಹಾರ ಔಷಧ ವೈದ್ಯಕೀಯ ವ್ಯವಸ್ಥೆ ಹೀಗೆ ಏನೆಲ್ಲ ಸವಲತ್ತುಗಳನ್ನು ಪಡೆಯುವ ಜೀವಗಳಿಗೂ ಸಮಾಧಾನವಿಲ್ಲ. ರೋಗ ರುಜಿನ ತಗುಲದಂತೆ ಎಚ್ಚರವಹಿಸಿದರೂ ಕಾಯಿಲೆಗೆ ಬೀಳುವ ಪ್ರಸಂಗಗಳೇನೂ ಕಡಿಮೆಯಿಲ್ಲ. ಬೇಕಾದ ದಿನಸಿಗಳನ್ನು ಕೊಳ್ಳಲು ಅಂಗಡಿಗೆ ಹೋಗಬೇಕೆಂದಿಲ್ಲ. ವಸ್ತುಗಳು ಮನೆಯತ್ತ ರವಾನೆಯಾಗಿ ತಲುಪಿದ ಕೂಡಲೇ ಇತ್ತ ಅಂಗಡಿ ಮಾಲಿಕನ ಅಕೌಂಟುಗಳಿಗೆ ಕ್ಷಣಾರ್ಧದಲ್ಲಿ ಆನ್ ಲೈನ್ ಮೂಲಕ ಹಣ ಜಮೆ ಆಗುತ್ತದೆ. ದಿನಕ್ಕೆ ಅದೆಷ್ಟೋ ಜನರ ನಾಲಿಗೆ ರುಚಿ ತಣಿಸುವ ಹಸಿದ ಹೊಟ್ಟೆಗಳ ಬೆಂಕಿಯನ್ನು ಆರಿಸುವವರ ಖಾತೆಗಳಿಗೂ ಹಣ ಜಮೆಯಾಗುವ ಬಗೆ ಹೀಗೆಯೇ. ವಿನೂತನ ತಂತ್ರಜ್ಞಾನ ಬಹುತೇಕವಾಗಿ ಬಹುತೇಕರಿಗೆ ಬಹುಪಯೋಗಿಯೆನಿಸಿದರೂ ಎಷ್ಟೋ ಸಲ ದೊಡ್ಡ ಪಜೀತಿಯನ್ನು ತರುತ್ತದೆ ಎನ್ನುವುದೂ ಅಷ್ಟೇ ಸತ್ಯ. ಕೆಲವೊಮ್ಮೆಯಂತೂ ಸಣ್ಣಪುಟ್ಟ ವಿಷಯಗಳಿಗೆ ದೊಡ್ಡ ರಂಪಾಟ ಆಗುತ್ತದೆ.
ಮೊದಲಿನಂತೆ ಒಕ್ಕಲುತನ ಮಾಡುವ ವ್ಯವಸ್ಥೆ ಈಗ ಬಹುತೇಕ ಕಡೆ ಮಾಯವಾಗಿದೆ. ಬೀಜ ಬಿತ್ತಬೇಕಿಲ್ಲ, ಕಳೆ ತೆಗೆಯಬೇಕಿಲ್ಲ, ಒಟ್ಟಾರೆ ಮಳೆ ಗಾಳಿ ಚಳಿಯೆನ್ನದೇ ಮೈ ಹಣ್ಣಾಗುವಂತೆ ರೈತೇಕಿ ಮಾಡುವ ದಿನಮಾನಗಳು ಈಗಿಲ್ಲ. ಏನೆಲ್ಲ ಇದ್ದರೂ ಸ್ವಾರ್ಥ ತುಂಬಿ ತುಳುಕುತ್ತಿದೆ. ಬಾಳೆಂಬ ಸಾಗರದಲ್ಲಿ ನೆಮ್ಮದಿ ಅನ್ನೋದು ತುಂಬಾ ದುಬಾರಿ ಆಗಿ ಬಿಟ್ಟಿದೆ. ಕೋಪ, ತಾಪ,ಸೇಡು, ದ್ವೇಷ ಎಲ್ಲೆಲ್ಲೂ ರಾರಾಜಿಸುತ್ತಿದೆ. ಒತ್ತಡವಿಲ್ಲದೇ ಜೀವನವೇ ಇಲ್ಲವೇನೋ ಅನ್ನುವಷ್ಟು ಒತ್ತಡ ತುಂಬಿ ತುಳುಕುತ್ತಿದೆ. ಇತರರಿಗಾಗಿ ಬದುಕುವುದೇ ಜೀವನದ ನಿಜವಾದ ಸಾರ್ಥಕತೆ. ಎಂದಿದ್ದಾರೆ ಸ್ವಾಮೀ ವಿವೇಕಾನಂದರು. ಹೊಸ ತಂತ್ರಜ್ಞಾನ ಸೃಜನಶೀಲತೆಯನ್ನು ತೋರುತ್ತದೆ. ಒತ್ತಡ ಸುಂದರ ಭಾವನೆಗಳನ್ನು ಹತ್ತಿಕ್ಕುತ್ತದೆ. ಮನಸ್ಸು ನಿರ್ಮಲವಾಗಿದ್ದರೆ ಮಾತ್ರ ನೆಮ್ಮದಿ ಸಮಾಧಾನ, ಸಾರ್ಥಕತೆ ದಕ್ಕುತ್ತದೆ. ನಮ್ಮ ಹಿರಿಕರಂತೆ ಆರೋಗ್ಯಮಯ ಸಾರ್ಥಕ ಜೀವನ ಪಡೆಯಲು ಅತಿಯಾದ ಯಾಂತ್ರಿಕ ಜೀವನ ಮತ್ತು ಒತ್ತಡವನ್ನು ದೂರ ತಳ್ಳೋಣ. ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳೋಣ. ಆದ ತಪ್ಪನ್ನು ತಿದ್ದಿಕೊಳ್ಳೋಣ. ತಪ್ಪನ್ನು ತಿದ್ದಿಕೊಳ್ಳುವುದು ಸಣ್ಣ ವಿಷಯವೇನೂ ಅಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ