ಹೊರಗಡೆಯಿಂದ ಬಂದವರಿಗೆಲ್ಲರಿಗೂ ಹೋಮ್ ಕ್ವಾರಂಟೈನ್ ಕಡ್ಡಾಯ
ಪ್ರಗತಿವಾಹಿನಿ ಸುದ್ದಿ, ಕಾರವಾರ – : ಸರಕಾರದ ನಿಯಮಾವಳಿ ಪ್ರಕಾರ ಶವ ಸಂಸ್ಕಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಉಪವಿಭಾಗಧಿಕಾರಿ, ತಹಶೀಲ್ದಾರ, ತಾಲೂಕು ಪಂಚಾಯತ, ಇಒ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಕೋವಿಡ್-೧೯ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಯಾವುದೇ ವ್ಯಕ್ತಿ ಮರಣಹೊಂದಿದಾಗ ಸರಕಾರದ ನಿಯಮಾನುಸಾರ ಆ ವ್ಯಕ್ತಿಯ ಶವ ಸಂಸ್ಕಾರವನ್ನು ಕೈಗೊಳ್ಳುವ ಅಧಿಕಾರ ಸ್ಥಳೀಯ ಸಂಸ್ಥೆ ಮತ್ತು ಅಧಿಕಾರಿಗಳಿಗಿದ್ದು, ಇದನ್ನು ವಿರೋಧಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್-೧೯ಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಇದ್ದು, ಯಾವುದೇ ವ್ಯಕ್ತಿಯಲ್ಲಿ ಕೋವಿಡ್-೧೯ ಕಂಡುಬಂದಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡಬೇಕು ಮತ್ತು ಇದರೊಂದಿಗೆ ಇತರೆ ಕಾಯಿಲೆಗಳಿದ್ದಲ್ಲಿ ತ್ವರಿತವಾಗಿ ಆ ರೋಗಕ್ಕೆ ಚಿಕಿತ್ಸೆ ನೀಡಬೇಕು. ಎಲ್ಲ ರೋಗಿಗಳನ್ನು ಕಾರವಾರ ವೈದ್ಯಕೀಯ ಸಂಸ್ಥೆಯ ಕೋವಿಡ್ ವಾರ್ಡ್ಗೆ ಕಳುಹಿಸಿ ಕೊಡಲು ಮುಂದಾದಲ್ಲಿ ವಿಳಂಭವಾಗಿ ಸಮಸ್ಯೆ ಉದ್ಭವಿಸುವ ಸಂಭವವಿರುತ್ತದೆ ಎಂದು ಹೇಳಿದರು.
ಎಲ್ಲ ಅಧಿಕಾರಿ ವರ್ಗದವರು ಟೀಮ್ ಆಗಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಯಾವುದೇ ಸಮಸ್ಯೆ ಅಥವಾ ಸಾವು ಸಂಭವಿಸುವುದಿಲ್ಲ. ಪ್ರತಿ ರೋಗಿಯ ಬಗ್ಗೆ ಲಕ್ಷ ವಹಿಸಿ ಚಿಕಿತ್ಸೆ ಕೊಡಿಸಬೇಕು. ಇದರಲ್ಲಿ ವಿಫಲವಾದಲ್ಲಿ ಎಸಿ ಮತ್ತು ತಹಶೀಲ್ದಾರರು ನೇರ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಇನ್ನುಮುಂದೆ ಹೊರಗಡೆಯಿಂದ ಬಂದವರಿಗೆಲ್ಲರಿಗೂ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿದ್ದು ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಕಾಂಟ್ಯಾಕ್ಟ್ ಟ್ರಸ್ಸಿಂಗ್ ಮತ್ತು ಕ್ವಾರಂಟೈನ್ ನಿಗಾ ಸರಿಯಾಗಿ ನಿಭಾಯಿಸಿ. ಕಂಟೈನ್ಮೆಂಟ್ ಜೋನ್ಗಳ ನಿರ್ವಹಣೆ ಅತಿಮುಖ್ಯವಾಗಿದ್ದು, ಟೀಮ್ ವರ್ಕ್ ಆಗಿ ಕಾರ್ಯನಿರ್ವಹಿಸಿದಲ್ಲಿ ಕೋವಿಡ್-೧೯ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್, ಎಸಿ ಪ್ರಿಯಾಂಗಾ ಎಂ, ಜಿಲ್ಲಾ ಸರ್ವೆಕ್ಷಣಾಧಿಕಾರಿ ವಿನೋಧ ಭೂತೆ, ತಹಶೀಲ್ದಾರ ಆರ್.ವಿ.ಕಟ್ಟಿ, ತಾಲೂಕು ವೈದ್ಯಾಧಿಕಾರಿ ಸುರಜ್ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ