*ಜಾತಿ ಗಣತಿ ವರದಿ ಜಾರಿ ಮಾಡಲು ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಸರ್ಕಾರಕ್ಕಿದೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾತಿ ಗಣತಿ ವರದಿ ವಿಚಾರದಲ್ಲಿ ಯಾರಿಗೆ ಆತಂಕ ಮತ್ತು ಗೊಂದಲ ಇದೆ. ಅದನ್ನು ಪರಿಹರಿಸಲು ಒಳ್ಳೆಯ ಮಾರ್ಗ ಎಂದರೆ ವಿಶೇಷ ಅಧಿವೇಶನ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾತಿ ಗಣತಿ ವರದಿ ಜಾರಿ ಮಾಡಲು ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಸರ್ಕಾರಕ್ಕಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಬಿಡುಗಡೆ ಕುರಿತು ಸದನದಲ್ಲಿ ಸುದೀರ್ಘವಾಗಿ ಚರ್ಚೆ ಆಗಬೇಕಿದೆ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯಬೇಕು. ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ. ಆತಂಕ ಇದ್ದವರು ಸದನದಲ್ಲಿ ಚರ್ಚಿಸಬೇಕು. ಬಹಿರಂಗವಾಗಿ ರಾಜ್ಯದ ಜನರಿಗೂ ಅದು ಗೊತ್ತಾಗಬೇಕಿದೆ ಎಂದರು.
ಒಕ್ಕಲಿಗ ಸಮುದಾಯದ 35 ಶಾಸಕರ ಜೊತೆಗೆ ಡಿ.ಕೆ.ಶಿವಕುಮಾರ ಸಭೆ ಮಾಡುತ್ತಿದ್ದಾರೆ. ನಾವು ಅದಕ್ಕಿಂತ ಮುಂದೆ ಹೋಗಿ ಹೇಳುತ್ತಿದ್ದೇವೆ. ಸದನದಲ್ಲಿ ಚರ್ಚೆ ಆಗಬೇಕು. ಮೂರನಾಲ್ಕು ದಿನ ಅದೇ ವಿಷಯಕ್ಕೆ ಮೀಸಲಿಡಬೇಕು. ವರದಿ ಸರಿ, ತಪ್ಪಿನ ಬಗ್ಗೆ ಹೇಳಲಿ. ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಜಾತಿ ಗಣತಿಯಿಂದ ರಾಜಕೀಯದ ಮೇಲೆ ಯಾವುದೇ ರೀತಿ ಪರಿಣಾಮ ಬೀರಲ್ಲ. ನಮ್ಮ ರಾಜ್ಯದಲ್ಲಿ ಒಂದು ಸಾವಿರ ಮತ ಇರುವವರು ಸಹ ಶಾಸಕರಾಗಿದ್ದಾರೆ. ಹಾಗಾಗಿ, 50-70ಸಾವಿರ ಮತ ಇರುವವರು ಯಾಕೆ ಆತಂಕ ಪಡಬೇಕು ಎಂದು ಪ್ರಶ್ನಿಸಿದರು.
ನಾಳೆ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುತ್ತಿರುವುದಕ್ಕೆ ಪೆಟ್ರೋಲ್, ಡಿಸೇಲ್ ಸೇರಿ ಮತ್ತಿತರ ಬೆಲೆ ಏರಿಕೆಯನ್ನು ಸೇರಿಸಿ ಪ್ರತಿಭಟನೆ ಮಾಡಿದರೆ ಒಳ್ಳೆಯದಾಗುತ್ತದೆ. ಆಗ ನಾವು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುವುದು ತಪ್ಪುತ್ತದೆ ಎಂದು ಬಿಜೆಪಿ ನಾಯಕರಿಗೆ ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟರು.
ಜನರಿಗೆ ಯಾವುದೇ ರೀತಿ ಆಕ್ರೋಶ ಇಲ್ಲ. ನಮಗೆ ನಾವೇ ಆಕ್ರೋಶಗೊಂಡಿದ್ದೇವೆ. ಸರಿ ಇದ್ದರೆ ಪ್ರತಿಭಟನೆ ಮಾಡಲಿ, ಆದರೆ, ಅನವಶ್ಯಕವಾಗಿ ಮಾಡುತ್ತಿದ್ದಾರೆ ಎಂದು ಸತೀಶ ಜಾರಕಿಹೊಳಿ ಟಾಂಗ್ ಕೊಟ್ಟರು.
ಮಹಾರಾಷ್ಟ್ರದ ಜಲಾಶಯಗಳಿಂದ ರಾಜ್ಯಕ್ಕೆ ನೀರು ಬಿಡುವ ವಿಚಾರದಲ್ಲಿ ಅವರಿಗೆ ಮತ್ತೆ ಮನವಿ ಮಾಡಿಕೊಳ್ಳುತ್ತೇವೆ. ಕೃಷ್ಣಾ ನದಿಗೆ ಅವರು ನೀರು ಬಿಟ್ಟರೆ ನಾವು ಜತ್ತ ತಾಲ್ಲೂಕಿಗೆ ನೀರು ಬಿಡುವ ಯೋಜನೆ ಇದೆ. ಆ ಬಗ್ಗೆ ಮಾತುಕತೆ ಆಗಿದೆ. ಆದರೆ, ಅದು ಅನುಷ್ಠಾನಕ್ಕೆ ಬಂದಿಲ್ಲ. ಕಲ್ಲೋಳ, ಕಾರದಗಾ ಬ್ಯಾರೇಜ್ ನಿಂದ ನೀರು ಬಿಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಜೂನ್, ಜುಲೈವರೆಗೆ ಹಿಡಕಲ್ ಜಲಾಶಯದಲ್ಲಿ ನೀರು ಕಾಯ್ದಿಟ್ಟುಕೊಳ್ಳಬೇಕು. ನೀರಾವರಿ, ಅರಣ್ಯ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ನೂತನ ಜಿಲ್ಲಾಧಿಕಾರಿ ಕಚೇರಿ ಜಾಗವನ್ನು ಅಂತಿಮಗೊಳಿಸಬೇಕಿದೆ. ಈ ಎಲ್ಲ ವಿಚಾರಗಳ ಕುರಿತು ಇಂದಿನ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು ಎಂದರು.