
ಪ್ರಗತಿವಾಹಿನಿ ಸುದ್ದಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ಮತ್ತೆ ಜಾತಿ ಗಣತಿ ನಡೆಯುತ್ತಿದೆ. 16 ದಿನಗಳ ಕಾಲ ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷೆ ಆರಂಭವಾಗಲಿದೆ. ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. ಸಮಯ ವ್ಯರ್ಥ ಮಾಡದೆ ಜಾತಿ ಗಣತಿ ನಡೆಸಲು ತಂತ್ರಜ್ಞಾನ ಬಳಕೆ ಮಾಡಲಾಗಿದೆ.
ರಾಜ್ಯದಲ್ಲಿ ಒಟ್ಟು ಸುಮಾರು 1.75 ಲಕ್ಷ ಗಣತಿದಾರರ ಮೂಲಕ, ತಂತ್ರಜ್ಞಾನ ಬಳಸಿಕೊಂಡು ಕರಾರುವಾಕ್ ಹಾಗೂ ಜಾಗೃತೆಯಿಂದ ಸಮೀಕ್ಷೆ ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ.
60 ವಿವಿಧ ಪ್ರಶ್ನೆಗಳ ಮೂಲಕ ಗಣತಿದಾರರು ಸಮೀಕ್ಷೆ ನಡೆಸಲಿದ್ದಾರೆ. ಮೊಬೈಲ್ ಆ್ಯಪ್ ಬಳಸಿ, ಗಣತಿದಾರರು ಮಾಹಿತಿ ಎಂಟ್ರಿ ಮಾಡಲಿದ್ದಾರೆ. ಮನೆ, ಮನೆಗಳ ಸಮೀಕ್ಷೆ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ.
ಸಮೀಕ್ಷೆ ನಡೆಸಲು ಸಮೀಕ್ಷಾ ಬ್ಲಾಕಿನ ಭೌಗೋಳಿಕ ವ್ಯಾಪ್ತಿಯನ್ನು ನಿರ್ಧರಿಸಬೇಕಾಗಿದೆ. ಈ ಬಾರಿ ಸಮೀಕ್ಷೆಯಲ್ಲಿ ಮನೆಗಳಿಗೆ ಎಸ್ಕಾಂಗಳು ಒದಗಿಸಿರುವ ವಿದ್ಯುತ್ ಸಂಪರ್ಕದ ಆರ್.ಆರ್. ಮೀಟರ್ಗಳ ಆಧಾರದ ಮೇಲೆ ಸಮೀಕ್ಷಾ ಬ್ಲಾಕಿನ ವ್ಯಾಪ್ತಿಯನ್ನು ನಿರ್ಧರಿಸಲಾಗುತ್ತದೆ. ಸಮೀಕ್ಷಾ ಸಮಯದಲ್ಲಿ ಎಲ್ಲಾ ಮನೆಗಳು, ಕುಟುಂಬಗಳು ಮತ್ತು ವ್ಯಕ್ತಿಗಳನ್ನು ಸಮೀಕ್ಷೆಯಲ್ಲಿ ಒಳಪಡಿಸಲು ಸಮೀಕ್ಷಾ ಬ್ಲಾಕಿನಲ್ಲಿರುವ ಪ್ರತಿಯೊಂದು ಮನೆ ಗುರುತಿಸುವುದರ ಜೊತೆಗೆ, ವಸತಿ ರಹಿತ ಕುಟುಂಬಗಳು, ವ್ಯಕ್ತಿಗಳು ವಾಸಿಸುತ್ತಿರುವ ಸ್ಥಳ, ಪ್ರದೇಶಗಳನ್ನು ಗುರುತಿಸುವುದು ಅಗತ್ಯವಾಗಿದೆ.
ಇಂಧನ ಇಲಾಖೆ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಸರಬರಾಜು ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕ ನೀಡಲಾಗಿರುವ ವಿದ್ಯುತ್ ಮೀಟರ್ ಗಳ ಆಧಾರದ ಮೇಲೆ ರಾಜ್ಯದಲ್ಲಿರುವ ಎಲ್ಲಾ ಮನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ರಾಜ್ಯದಲ್ಲಿರುವ ಪ್ರತಿಯೊಂದು ವಿದ್ಯುಚ್ಛಕ್ತಿ ಸಂಪರ್ಕ ಮೀಟರಿಗೆ ಒಂದು ವಿಶಿಷ್ಟ ಆರ್ಆರ್ ಸಂಖ್ಯೆಯನ್ನು ವಿದ್ಯುತ್ ಸರಬರಾಜು ಸಂಸ್ಥೆ ನೀಡಿರುತ್ತವೆ. ಇವುಗಳನ್ನು ಆಧರಿಸಿಯೇ ಪರಿಶೀಲನೆ ನಡೆಸಿ, ಮೀಟರ್ ರೀಡರ್ಗಳು ಸಮೀಕ್ಷೆಗೆ ಒಳಪಡಿಸಬೇಕಾಗಿರುವ R.R linked ಮನೆಗಳನ್ನು ಪಟ್ಟಿ ಮಾಡಿದ್ದಾರೆ.
ರಾಜ್ಯದಲ್ಲಿ ಅತಿದೂರದಲ್ಲಿರುವ ಗುಡ್ಡಗಾಡು, ಅರಣ್ಯ ಹಾಗೂ ಅಂತಹ ಕೆಲವು ದುರ್ಗಮ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವ ಮನೆಗಳು ಇರುವ ಸಾಧ್ಯತೆಗಳಿವೆ. ಇದಲ್ಲದೆ, ನಗರ ಪ್ರದೇಶಗಳ ನಿಬಿಡ ಜನವಸತಿ ಇರುವ ಅಥವಾ ಸ್ಲಮ್ ಪ್ರದೇಶಗಳಲ್ಲಿ ಮನೆಗಳು ಇಕ್ಕಟ್ಟಾಗಿದ್ದು, ಪ್ರತ್ಯೇಕ ಆರ್.ಆರ್. ಸಂಖ್ಯೆ ಇಲ್ಲದೇ ಇರುವ ಸನ್ನಿವೇಶಗಳು ಇರಬಹುದು. ಅಂತಹ ಪ್ರಕರಣಗಳಲ್ಲಿ-ಅಂತಹ ಮನೆಗಳನ್ನು ಸಮೀಕ್ಷೆಯಲ್ಲಿ ಒಳಪಡಿಸುವ ಅವಕಾಶವನ್ನು ಆ್ಯಪ್ನಲ್ಲಿ ಕಲ್ಪಿಸಲಾಗಿರುತ್ತದೆ.
ಒಟ್ಟಿನಲ್ಲಿ 16 ದಿನಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ, ಡಿಸೆಂಬರ್ ವೇಳೆಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.