*ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸಲು ಸೂಚನೆ: CWRC ಆದೇಶಕ್ಕೆ ಸಿಡಿದೆದ್ದ ರೈತರು*

ಪ್ರಗತಿವಾಹಿನಿ ಸುದ್ದಿ: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಕರ್ನಾಟಕ್ಕೆ ಶಿಫಾರಸು ಮಾಡಿದೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಸಮಿತಿ, ಪ್ರತಿ ದಿನ 3,500 ಕ್ಯೂಸೆಕ್ನಂತೆ 15 ದಿನಗಳ ಕಾಲ ಒಟ್ಟು 4 ಟಿಎಂಸಿ ಗಳಷ್ಟು ನೀರು ಹರಿಸಲು ಸೂಚಿಸಿದೆ. ಈ ಆದೇಶಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ನಮಗೆ ನೀರಿನ ಕೊರತೆ ಇದೆ, ನಾನು ಸಿಎಂ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇನೆ. ನಮಗೆ ಮಳೆ ಇಲ್ಲ, ವರ್ಷ ಪೂರ್ತಿ ಕುಡಿಯುವ ನೀರು ಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿಯ ಸೂಚನೆ ಹೊರಬೀಳುತ್ತಿದ್ದಂತೆ ರಾಜ್ಯದಲ್ಲಿ ರೈತರು ಸಿಡಿದೆದ್ದಿದ್ದಾರೆ. ಮಂಡ್ಯದಲ್ಲಿ ಬೀದಿಗಿಳಿದ ಅನ್ನದಾತರು ಸಮಿತಿಯ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಕ್ತ ಕೊಟ್ಟರೂ ನೀರು ಮಾತ್ರ ಬಿಡಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ನಮಗೆ ಕುಡಿಯಲು ನೀರಿಲ್ಲ. ಬೆಳೆಗಳಿಗೆ ನೀರಿಲ್ಲದೇ ಒಗಣುತ್ತಿವೆ. ಜನ-ಜಾನುವಾರುಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕಕ್ಕೆ ಮರಣಶಾಸನದಂತಹ ಈ ಆದೇಶ ಖಂಡನೀಯ. ಒಂದು ತೊಟ್ಟು ನೀರು ತಮಿಳುನಾಡಿಗೆ ಹರಿದರೆ ರಾಜ್ಯದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಈ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಾರದು. ರಾಜ್ಯದ ಬರಗಾಲದ ಸ್ಥಿತಿ, ರೈತರ ದುಸ್ಥಿತಿಯನ್ನು CWRCಗೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.


