Latest

ಚಂದ್ರಶೇಖರ್ ಸಾವು ಪ್ರಕರಣ; ಘಟನೆ ಮರು ಸೃಷ್ಟಿ ಮಾಡಿ ತನಿಖೆಗೆ ಸೂಚಿಸಿದ ಸಿಎಂ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಇಂದು ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಹೊನ್ನಾಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ದಾವಣಗೆರೆ ಭಾಗದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ. ಈ ರೀತಿ ಸಾವು ಸಂಭವಿಸುತ್ತೆ ಎಂದು ಯಾರೂ ಊಹಿಸಿರಲಿಲ್ಲ. ರೇಣುಕಾಚಾರ್ಯ ನನ್ನ ಸಹೋದರನಿದ್ದಂತೆ. ರೇಣುಕಾಚಾರ್ಯ ಅವರ ಎಲ್ಲಾ ಕೆಲಸಗಳನ್ನು ಚಂದ್ರು ನೋಡಿಕೊಳ್ಳುತ್ತಿದ್ದ. ಈಗ ಇದ್ದಕ್ಕಿದ್ದಂತೆ ಚಂದ್ರು ಸಾವನ್ನಪ್ಪಿರುವುದು ಆಘಾತ ತಂದಿದೆ ಎಂದರು.

ಚಂದ್ರು ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ. ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಸಂಪೂರ್ಣ ತನಿಖೆಯಾಗುವವರೆಗೂ ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದಿದ್ದೇನೆ. ಘಟನೆ ಮರುಸೃಷ್ಟಿ ಮಾಡಿ ತನಿಖೆ ನಡೆಸಲು ಹೇಳಿದ್ದೇನೆ ಎಂದು ಹೇಳಿದರು.

ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್ ಎಸ್ ಎಲ್ ವರದಿ ಬರಬೇಕಿದೆ. ಚಂದ್ರು ಸಾವಿನ ಬಗ್ಗೆ ಎರಡು ಸಾಧ್ಯತೆ ಕಂಡುಬರುತ್ತದೆ. ಚಂದ್ರು ಜನಪ್ರಿಯತೆ ಎಲ್ಲವನ್ನು ನೋಡಿದಾಗ ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತದೆ. ಆದರೆ ಘಟನೆ ನಡೆದ ಸ್ಥಳ ಪರಿಶೀಲಿಸಿದಾಗ ಅಲ್ಲಿರುವ ಕೆಲ ಕುರುಹು ಗಮನಿಸಿದರೆ ಅಪಘಾತವೂ ಇರಬಹುದು ಎನಿಸುತ್ತದೆ. ಹಾಗಾಗಿ ಸತ್ಯಾಸತ್ಯತೆ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

 

   ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಕುರಿತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದು,  ಸಂಪೂರ್ಣ ತನಿಖೆಯಾಗುವವರೆಗೂ, ಕಾರಣ ನಿಖರವಾಗಿ ಪತ್ತೆಯಾಗುವವರೆಗೆ ಯಾವುದೇ  ತೀರ್ಮಾನಕ್ಕೆ ಬರುವುದು ಬೇಡ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 
ಅವರ ಕುಟುಂಬದ ಸದಸ್ಯರು ಹಾಗೂ ನಮ್ಮೆಲ್ಲರಿಗೂ ಚಂದ್ರು ಸಾವು ಕಾಡುತ್ತಿದೆ. ಇಲ್ಲಿಗೆ ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ನಾನೊಬ್ಬ ಸಹೋದರನಾಗಿ ಬಂದಿದ್ದೇನೆ ಎಂದರು.
*ಹಲವು ಆಯಾಮಗಳು*
ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.   ಎರಡು ರೀತಿಯ ಸಾಧ್ಯಾಸಾಧ್ಯತೆಗಳಿವೆ. ಚಂದ್ರು  ಹಿನ್ನೆಲೆ ಗಮನಿಸಿದರೆ ಕೊಲೆಯಾಗಿರುವ ಸಂಭವವಿರಬಹುದು ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಕಾರಿನ ಸ್ಥಿತಿ ನೋಡಿದರೆ ಅಪಘಾತವಾಗಿರಬಹುದುದೆಂಬ ಸಾಧ್ಯತೆಯೂ ಇದೆ. ಯಾವುದನ್ನೂ ನಾವು ತೆಗೆದುಹಾಕುವಂತಿಲ್ಲ. ಎರಡೂ ಆಯಾಮದಲ್ಲಿ ತನಿಖೆ  ಮಾಡಲು ಸೂಚಿಸಲಾಗಿದೆ.
ಸಾಕ್ಷ್ಯಾಧಾರಗಳು ಬಹಳ ಮುಖ್ಯ. ಚಂದ್ರು ಹಿಂದಿನ ಸೀಟಿಗೆ ಯಾಕೆ ಬಂದ ಎನ್ನುವ ಪ್ರಶ್ನೆಯಿದೆ. ಅವನ ತಲೆಯಲ್ಲಿ ಕೂದಲು ಹೋಗಿರುವುದು, ಕಾರಿನ ಮುಂದಿನ ಗಾಜು ಒಡೆದಿದೆ, ಹಿಂದಿನ ಗಾಜಿಗೆ ಏನೂ ಆಗದಿರುವುದು ಎನ್ನುವುದು ಮೇಲ್ನೋಟಕ್ಕೆ ಸಾಮಾನ್ಯರಿಗೆ ಕಾಡುವ ಪ್ರಶ್ನೆಗಳು. ಆದರೆ ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆ ವರದಿ ಬರಬೇಕು. ಅದಕ್ಕೆ ಬೆಂಬಲವಾಗಿ ಎಫ್. ಎಸ್.ಎಲ್ ವರದಿಯೂ ಮುಖ್ಯ. ಅಲ್ಲಿನ ಪದಾರ್ಥಗಳನ್ನು ಆಯ್ಕೆ ಮಾಡಿ ತನಿಖೆ ಮಾಡುತ್ತಾರೆ. ದೇಹದ ನೀರು, ಕಾಲುವೆ ನೀರು ಇವುಗಳ ವರದಿ ಅಗತ್ಯ. ಅಪರಾಧ ಹೇಗಾಗಿರಬಹುದೆಂಬ ಮರುಸೃಷ್ಟಿ ಮಾಡಿ ಪರಿಣಿತರು ನೋಡುತ್ತಾರೆ. ಈ ಮೂರು ತನಿಖೆ ಆದ ನಂತರ ಮುಂದಿನ ತನಿಖೆಯ ಕೈಗೊಳ್ಳಲಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪ್ರತ್ಯೇಕ ತನಿಖಾ ತಂಡದ ಅಗತ್ಯತೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
*ಭರಿಸಲಾಗದ ದುಃಖ*
ಚಂದ್ರಶೇಖರ್ ಅಗಲಿರುವುದು ಅವರ ಪೋಷಕರಿಗೆ ಭರಿಸಲಾಗದ ದುಃಖವಾಗಿದೆ. ಚಂದ್ರು ಅವರನ್ನು ಶಾಸಕ ರೇಣುಕಾಚಾರ್ಯ ತುಂಬಾ ಹಚ್ಚಿಕೊಂಡಿದ್ದರು. ಸಿವಿಲ್ ಇಂಜಿನಿಯರ್ ಆಗಿಯೂ ಕೂಡ  ತಮ್ಮ ದೊಡ್ಡಪ್ಪನಿಗೆ ಸಹಾಯವಾಗಲು ಬಡವರ ಕಣ್ಣೀರು ಒರೆಸುತ್ತಾ, ಇಲ್ಲದವರಿಗೆ ಸಹಾಯ ಮಾಡುತ್ತಾ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಾ ಜನಪ್ರಿಯನಾಗಿದ್ದ. ರೇಣುಕಾಚಾರ್ಯರ ಅರ್ಧ ಭಾರವನ್ನು ಅವನೇ ಹೊತ್ತಿದ್ದ. ಈ ರೀತಿ ಸಾವಾಗುತ್ತದೆ ಎಂದು ಯಾರೂ ಕನಸು ಮನಸಿನಲ್ಲಿ ನೆನಸಿರಲಿಲ್ಲ. ರೇಣುಕಾಚಾರ್ಯ ವರಿಗೆ ಆಘಾತವಾಗಿದೆ. ದೊಡ್ಡ ಯಕ್ಷಪ್ರಶ್ನೆಯಾಗಿ ಈ ಸಾವು ನಮ್ಮೆಲ್ಲರನ್ನು ಕಾಡುತ್ತಿದೆ.  ರೇಣುಕಾಚಾರ್ಯ ಸಹೋದರ ಇದ್ದಂತೆ. ಅವರ ಸಂಕಟ  ನಮ್ಮ ಸಂಕಟ ಕೂಡ ಎಂದರು.

ಮಕ್ಕಳ ಮೇಲೆ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ

https://pragati.taskdun.com/latest/hebbala-schoolteacherarrestedpocso-case/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button