Kannada NewsKarnataka NewsPolitics

*ರಾಜ್ಯದ ರಾಜಕಾರಣಿಗಳ ಪಾಲಿಗೆ ಮಾತೃ ಸ್ವರೂಪಿಣಿಯಾಗಿದ್ದವರು ಚನ್ನಮ್ಮ: ಸಿಎಂ ಡಿ ಕೆ ಶಿವಕುಮಾರ್*

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮನ್ನವರ ಪಾರ್ಥಿವ ಶರೀರಕ್ಕೆ ಪದ್ಮನಾಭನಗರ ನಿವಾಸದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ಶನಿವಾರ ರಾತ್ರಿ ಅಂತಿಮ ನಮನ ಸಲ್ಲಿಸಿದರು. ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮಾಜಿ ಸಿಎಂ ದಿವಂಗತ ಎಸ್ ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಪುತ್ರಿ ಮಾಳವಿಕಾ ಉಪಸ್ಥಿತರಿದ್ದರು.


ರಾಜ್ಯದ ರಾಜಕಾರಣಿಗಳ ಪಾಲಿಗೆ ಮಾತೃ ಸ್ವರೂಪಿಣಿಯಾಗಿದ್ದವರು ಶ್ರೀಮತಿ ಚನ್ನಮ್ಮ: ಸಿಎಂ ಡಿ ಕೆ ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು :

Home add -Advt

“ರಾಜ್ಯದ ರಾಜಕಾರಣಿಗಳ ಪಾಲಿಗೆ ಮಾತೃ ಸ್ವರೂಪಿಣಿಯಾಗಿದ್ದವರು ಶ್ರೀಮತಿ ಚನ್ನಮ್ಮ ಅವರು ಎಲ್ಲರಿಗೂ ಮಾದರಿಯಾಗಿದ್ದರು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮನವರ ಪಾರ್ಥಿವ ಶರೀರಕ್ಕೆ ಶಿವಕುಮಾರ್ ಅವರು ಅಂತಿಮ ನಮನ ಸಲ್ಲಿಸಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಮಾತೃ ಸ್ವರೂಪರಾದ ಚನ್ನಮ್ಮ ಅವರ ನಿಧನ ಮನಸ್ಸಿಗೆ ನೋವಾಗಿದೆ. ಅವರ ಆರೋಗ್ಯ ಗಂಭೀರವಾಗಿತ್ತು ಎಂಬ ಮಾಹಿತಿ ನಮಗೆ ಬಂದಿತ್ತು. ಅವರು ಅಪಾರ ದೈವ ಭಕ್ತೆಯಾಗಿದ್ದರು. ದೇಶದ ದೊಡ್ಡ ಕುಟುಂಬಕ್ಕೆ ಕಷ್ಟ ಹಾಗೂ ಸುಖದ ದಿನಗಳಲ್ಲಿ ಹಗಲು ರಾತ್ರಿ ಜೊತೆಯಾಗಿ ನಿಂತು ಸೇವೆ ಮಾಡಿದ ಧೀಮಂತ ಮಹಿಳೆ” ಎಂದು ಸ್ಮರಿಸಿದರು.

“ನಾವುಗಳು ಯಾರೂ ಶಾಶ್ವತವಲ್ಲ. ಆದರೆ ದೇಶ ಹಾಗೂ ರಾಜ್ಯದ ರಾಜಕಾರಣಿಗಳ ಪಾಲಿಗೆ ಮಾತೃ ಸ್ವರೂಪಿಣಿಯಾಗಿದ್ದರು. ದೇವೇಗೌಡರು ಹಾಗೂ ಆ ಕುಟುಂಬದ ಎಲ್ಲಾ ಮಕ್ಕಳ ಯಶಸ್ಸಿಗೆ ಅನೇಕ ತ್ಯಾಗ ಮಾಡಿದ ಹೆಣ್ಣುಮಗಳು. ಆಕೆಯನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕರ್ನಾಟಕ ಸರ್ಕಾರ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಅಂತಿಮ ನಮನಗಳನ್ನು ಸಲ್ಲಿಸಲಾಗುವುದು. ಸೋಮವಾರ ಅವರ ಅಂತ್ಯಕ್ರಿಯೆಯನ್ನು ಮಾಡಲು ಕುಟುಂಬದವರು ತೀರ್ಮಾನ ಮಾಡಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸರ್ಕಾರದ ಕಡೆಯಿಂದ ಸೂಚನೆ ನೀಡಲಾಗಿದೆ” ಎಂದರು.

“ಮಾಜಿ ಪ್ರಧಾನಮಂತ್ರಿಗಳ ಧರ್ಮಪತ್ನಿ, ಕೇಂದ್ರ ಸಚಿವರ ತಾಯಿಯಾಗಿದ್ದು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸರ್ಕಾರಿ ಗೌರವ ನೀಡಲು ತೀರ್ಮಾನಿಸಿದ್ದೇವೆ. ದೇವೇಗೌಡರ ರಾಜಕೀಯ ಹಾದಿಯ ಎಲ್ಲಾ ಹಂತಗಳಲ್ಲಿ ಅವರ ಜೊತೆಗೆ ನಿಂತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದರು.

Related Articles

Back to top button