
ವಂಶವೃಕ್ಷ ದೃಢೀಕರಣಕ್ಕೆ ಹೊಸ ಮಾರ್ಗಸೂಚಿ: ಇನ್ನು ಮುಂದೆ ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರ
ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು: ವಂಶವೃಕ್ಷ (Family Tree) ದೃಢೀಕರಣ ಪತ್ರ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಏಕರೂಪಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರ ಸಹಿಯಿರುವ ಸುತ್ತೋಲೆ ಪ್ರಕಾರ, ಇನ್ನು ಮುಂದೆ ವಂಶವೃಕ್ಷ ದೃಢೀಕರಣ ಪತ್ರವನ್ನು ಕೇವಲ ಆನ್‌ಲೈನ್ ತಂತ್ರಾಂಶದ ಮೂಲಕವೇ ನೀಡಲಾಗುತ್ತದೆ.
ಹೊಸ ಮಾರ್ಗಸೂಚಿಯಂತೆ, ಅರ್ಜಿದಾರರು ರೂ.100 ಮೌಲ್ಯದ ಛಾಪಾ ಕಾಗದದಲ್ಲಿ ನೋಟರಿ ದೃಢೀಕರಿಸಿದ ಅಫಿಡವಿಟ್, ಆಧಾರ್ ಕಾರ್ಡ್ ಹಾಗೂ ಕುಟುಂಬದ ಸದಸ್ಯರ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಯ ನಂತರ, ಸಂಬಂಧಿತ ಗ್ರಾಮ ಆಡಳಿತ ಅಧಿಕಾರಿ (VAO) ಅರ್ಜಿದಾರರ ಮನೆಗೆ ಭೇಟಿ ನೀಡಿ, ದಾಖಲೆಗಳು ಮತ್ತು ಕುಟುಂಬದ ವಿವರಗಳನ್ನು ಸ್ಥಳ ಪರಿಶೀಲನೆ ಮೂಲಕ ದೃಢೀಕರಿಸಿ ತಮ್ಮ ವರದಿಯನ್ನು ರಾಜಸ್ವ ನಿರೀಕ್ಷಕರಿಗೆ ಸಲ್ಲಿಸಲಿದ್ದಾರೆ.
ಬಳಿಕ ರಾಜಸ್ವ ನಿರೀಕ್ಷಕರು ದಾಖಲೆಗಳನ್ನು ಪರಿಶೀಲಿಸಿ ತಮ್ಮ ಶಿಫಾರಸಿನೊಂದಿಗೆ ಉಪತಹಶೀಲ್ದಾರರಿಗೆ ಕಳುಹಿಸಲಿದ್ದಾರೆ.
ಅಂತಿಮವಾಗಿ, ವಂಶವೃಕ್ಷ ದೃಢೀಕರಣ ಅರ್ಜಿಯನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಅಧಿಕಾರ ಉಪತಹಶೀಲ್ದಾರರಿಗೇ ಇರಲಿದೆ.
ಅರ್ಜಿ ಅನುಮೋದನೆಯಾದ ಬಳಿಕ, ಡಿಜಿಟಲ್ ರೂಪದಲ್ಲಿ ವಂಶವೃಕ್ಷ ದೃಢೀಕರಣ ಪತ್ರವನ್ನು ಅರ್ಜಿದಾರರಿಗೆ ನೀಡಲಾಗುತ್ತದೆ.
ಈ ಹೊಸ ವ್ಯವಸ್ಥೆಯಿಂದ ವಂಶವೃಕ್ಷ ದೃಢೀಕರಣ ಪ್ರಕ್ರಿಯೆ ಹೆಚ್ಚು ಪಾರದರ್ಶಕ, ವೇಗದ ಹಾಗೂ ದುರುಪಯೋಗಕ್ಕೆ ಕಡಿವಾಣ ಹಾಕುವ ರೀತಿಯಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.




