

ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ವೀಕ್ಷಕರಾಗಿ ನೇಮಕವಾಗಿರುವ ಬೆಳಗಾವಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹೈದರಾಬಾದ್ ನಲ್ಲಿರುವ ಟಿಪಿಸಿಸಿ ಕಚೇರಿಗೆ ಭೇಟಿ ನೀಡಿ ಪೂರ್ವಭಾವಿ ಸಭೆ ನಡೆಸಿದರು.
ವನಪರ್ತಿ ವಿಧಾನಸಭಾ ಕ್ಷೇತ್ರಕ್ಕೆ ಚನ್ನರಾಜ ಹಟ್ಟಿಹೊಳಿ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಕ್ಷೇತ್ರದ ಹಾಗೂ ಅಭ್ಯರ್ಥಿಯ ಮಾಹಿತಿ ಪಡೆದು, ಸ್ಥಳೀಯ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಅವರು, ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರಗಳ ಕುರಿತು ವಿವರಿಸಿದರು.

ಕಾರ್ಯಕರ್ತರ ಜವಾಬ್ದಾರಿ ದೊಡ್ಡದಿದ್ದು, ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ತಲುಪಿಸಬೇಕು. ಕಾಂಗ್ರೆಸ್ ಇತಿಹಾಸ, ಸಾಧನೆಗಳನ್ನು ಜನರಿಗೆ ವಿವರಿಸಬೇಕು. ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್, ಚುನಾವಣೆಯಲ್ಲಿ ಗೆದ್ದ ತಕ್ಷಣ ಅವುಗಳನ್ನು ಜಾರಿಗೊಳಿಸಿರುವುದನ್ನು ಕ್ಷೇತ್ರದ ಜನರಿಗೆ ತಿಳಿಸಬೇಕು. ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರಿಗೆ ಹಾಗೂ ಜನಸಾಮಾನ್ಯರಿಗೆ ಯಾವ ರೀತಿಯಲ್ಲಿ ಪ್ರಯೋಜನವಾಗಿದೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ಜನರ ಜೀವನದಲ್ಲಿ ಯಾವ ರೀತಿ ಬದಲಾವಣೆ ತರುತ್ತಿವೆ ಎನ್ನುವುದನ್ನು ಜನರಿಗೆ ಮನಮುಟ್ಟುವಂತೆ ವಿವರಿಸಬೇಕು ಎಂದು ಚನ್ನರಾಜ ಪಕ್ಷದ ಮುಖಂಡರಿಗೆ ತಿಳಿಸಿದರು.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದಿರುವ ಮಹಿಳೆಯರು, ದೇವಸ್ಥಾನಗಳಿಗೆ ಉಚಿತವಾಗಿ ಬಸ್ ಗಳಲ್ಲಿ ತೆರಳಿ ಸರಕಾರದ ಹೆಸರಿನಲ್ಲಿ, ಮುಖ್ಯಮಂತ್ರಿಗಳ ಹಾಗೂ ಉಪಮುಖ್ಯಮಂತ್ರಿಗಳ ಹೆಸರಿನಲ್ಲಿ ಹಾಗೂ ಸಂಬಂಧಿಸಿದ ಸಚಿವರ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತಿದ್ದಾರೆ. ದೇವಸ್ಥಾನಗಳ ಆದಾಯವೂ ಹೆಚ್ಚಾಗಿದೆ. ಕರ್ನಾಟಕದ ಜಿಡಿಪಿ ಬೆಳವಣಿಗೆಗೆ ಗ್ಯಾರಂಟಿ ಯೋಜನೆಗಳು ನೆರವಾಗುತ್ತಿವೆ ಎನ್ನುವ ಮಾಹಿತಿಯನ್ನು ಚನ್ನರಾಜ ಹಟ್ಟಿಹೊಳಿ ತೆಲಂಗಾಣ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ವಿವರಿಸಿ, ತೆಲಂಗಾಣದಲ್ಲೂ ಇದೇ ಮಾದರಿಯಲ್ಲಿ ಚುನಾವಣೆ ಎದುರಿಸಬೇಕು ಎಂದು ಸಲಹೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ