ಪ್ರಗತಿವಾಹಿನಿ ಸುದ್ದಿ, ಹಾಸನ: ಜೈನಮುನಿ ಶ್ರವಣಬೆಳಗೊಳ ಮಠದ ಪೀಠಾಧಿಪತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಇಂದು ಬೆಳಗಿನಜಾವ ವಿಧಿವಶರಾಗಿದ್ದಾರೆ.
ಅವರಿಗೆ 74 ವರ್ಷ ವಯಸ್ಸಾಗಿತ್ತು. ಬುಧವಾರ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಬೆಳಗಿನಜಾವ 4.30ರ ಸುಮಾರಿಗೆ ಹೃದಯಾಘಾತದಿಂದ ಇಹಲೋಕ ಯಾತ್ರೆ ಮುಗಿಸಿದ್ದಾರೆ.
1949 ರ ಮೇ 3 ರಂದು ಕರ್ನಾಟಕದ ವರಂಗದಲ್ಲಿ ಜನಿಸಿದ ಅವರ ಪೂರ್ವಾಶ್ರಮದ ಹೆಸರು ‘ರತ್ನವರ್ಮ’. ಎಚ್.ಎಚ್.ಸ್ವಾಮೀಜಿ ಅವರು ಪ್ರಾಕೃತ, ಸಂಸ್ಕೃತ ಮತ್ತು ಕನ್ನಡದಲ್ಲಿ ಜೈನ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದರು. ಇತಿಹಾಸದಲ್ಲಿ (ಮೈಸೂರು ವಿಶ್ವವಿದ್ಯಾಲಯ) ಮತ್ತು ಎಂಎಇನ್ ತತ್ವಶಾಸ್ತ್ರದಲ್ಲಿ (ಬೆಂಗಳೂರು ವಿಶ್ವವಿದ್ಯಾಲಯ) ಎಂ.ಎ. ಪದವಿ ಪಡೆದಿದ್ದರು.
1969 ರ ಡಿಸೆಂಬರ್ 12 ರಂದು ಸನ್ಯಾಸಾಶ್ರಮ ಸ್ವೀಕರಿಸಿದ ಶ್ರೀಗಳು 1970 ರ ಏಪ್ರಿಲ್ 19 ರಂದು ಶ್ರವಣಬೆಳಗೊಳದ ಮಠದಲ್ಲಿ ಧರ್ಮಾಚಾರ್ಯ ಪೀಠ ಅಲಂಕರಿಸಿದ್ದರು. ಅವರು ಶ್ರವಣಬೆಳಗೊಳ ಶ್ರೀಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿದ್ದರು.
ಸ್ವಾಮೀಜಿಯವರ ನಿಸ್ವಾರ್ಥ ಸೇವೆಗೆ ಪ್ರತಿಯಾಗಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಅವರಿಗೆ ‘ಕರ್ಮಯೋಗಿ’ ಎಂಬ ಬಿರುದು ನೀಡಿ ಗೌರವಿಸಿದ್ದರು. ಭಗವಾನ್ ಮಹಾವೀರರ ನಿರ್ವಾಣದ 2500 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ದಕ್ಷಿಣ ಭಾರತದ ಉದ್ದ ಮತ್ತು ಅಗಲದಾದ್ಯಂತ ‘ಧರ್ಮಚಕ್ರ’ದ ಅತ್ಯಂತ ಯಶಸ್ವಿ ಪವಿತ್ರ ಪ್ರಯಾಣವನ್ನು ಆಯೋಜಿಸುವಲ್ಲಿ ಅವರ ಸಕ್ರಿಯ ಪಾತ್ರ ವಹಿಸಿದ್ದರು. ‘1000 ನೇ ವರ್ಷದ ಅಭಿಷೇಕ ಮತ್ತು ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದರು. ಅವರು 1988 ರಲ್ಲಿ ಇಂಗ್ಲೆಂಡ್‌ನ ಲೀಸೆಸ್ಟರ್‌ನ ಜೈನ ದೇವಾಲಯದ ಪವಿತ್ರೀಕರಣ ಮಾಡಿದ್ದರು.
*ಸಕಲ ಸರ್ಕಾರಿ ಗೌರವಗಳೊಂದಿಗೆ ಮಹಾಸ್ವಾಮಿಗಳ ಅಂತ್ಯಕ್ರಿಯೆ*
ಬೆಂಗಳೂರು, ಮಾರ್ಚ್ 23: ಇಂದು ನಿಧನರಾದ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
*ತೀವ್ರ ಸಂತಾಪ*
“ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಅಪಾರ ಸಂಖ್ಯೆಯ ಭಕ್ತರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದರು.
*ಡಿ.ಕೆ. ಶಿವಕುಮಾರ್ ಸಂತಾಪ*
ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
‘ಸ್ವಸ್ಥಿ ಶ್ರಿ ಚಾರುಕೀರ್ತಿ ಎಂಬ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ದೇಶಾದ್ಯಂತ ಅಪಾರ ಭಕ್ತವರ್ಗವನ್ನು ಹೊಂದಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಗಿದೆ. ಪೂಜ್ಯರು ಧರ್ಮ ರಕ್ಷಣೆ, ಸಮಾಜ ಸೇವೆಗೆ ತಮ್ಮ ಜೀವನ ಅರ್ಪಿಸಿಕೊಂಡಿದ್ದರು.
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆ ನೋವು ಭರಿಸುವ ಶಕ್ತಿ ಅವರ ಭಕ್ತ ವೃಂದಕ್ಕೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
*ಸಿದ್ದರಾಮಯ್ಯ ಸಂತಾಪ*
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ನಿಧನದ ಸುದ್ದಿ ಕೇಳಿ ಅತೀವ ನೋವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತೀಯ ಅಧ್ಯಾತ್ಮ ಪರಂಪರೆಯ ಹಿರಿಯ ಸಾಧಕರಾಗಿದ್ದ ಶ್ರೀಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಚಿಕಿತ್ಸೆ ಫಲಿಸದ ಕಾರಣದಿಂದ ದೇಹತ್ಯಾಗ ಮಾಡಿದ್ದಾರೆ.
ಸ್ವಸ್ಥಿ ಶ್ರೀ ಚಾರುಕೀರ್ತಿ ಬಿರುದಾಂಕಿತ ಜೈನ ಭಟ್ಟಾರಕ ಶ್ರೀಗಳಿಗೆ ಭಾರತ ಮಾತ್ರವಲ್ಲದೆ ವಿಶ್ವದ ನಾನಾ ದೇಶಗಳಲ್ಲಿ ಭಕ್ತರಿದ್ದಾರೆ. ಇಡೀ ಭಕ್ತ ಸಮೂಹಕ್ಕೆ ಶ್ರೀಗಳ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಮನುಕುಲದ ಅಂತರಂಗ ಶುದ್ಧಿ ಮತ್ತು ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡುತ್ತಿದ್ದ ಶ್ರೀಗಳು ಸ್ವತಃ ಬೆಂಗಳೂರು ಮತ್ತು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕ್ರಮವಾಗಿ ತತ್ವಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಾಕೃತ, ಸಂಸ್ಕೃತ ಮತ್ತು ಕನ್ನಡದಲ್ಲಿ ಅಪಾರ ಪಾಂಡಿತ್ಯ ಮತ್ತು ಪರಿಣತಿ ಹೊಂದಿದ್ದ ಇವರು ಪ್ರಾಕೃತ ವಿಶ್ವ ವಿದ್ಯಾಲಯವನ್ನೂ ಸ್ಥಾಪಿಸಿದ್ದರು. ಪಾಲಿಟೆಕ್ಷಿಕ್, ಎಂಜಿನಿಯರಿAಗ್, ನರ್ಸಿಂಗ್ ಕಾಲೇಜುಗಳನ್ನೂ ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣ ದೊರಕಿಸಿದ್ದಾರೆ.
ನಾನು ಹಲವು ಬಾರಿ ಶ್ರೀಗಳ ದರ್ಶನ ಮತ್ತು ಆಶೀರ್ವಾದ ಪಡೆದಿದ್ದೇನೆ. ಶ್ರೀಗಳು ಜೀವಮಾನದಲ್ಲಿ ಮೊಬೈಲ್ ಸ್ಪರ್ಷಿಸಿಲ್ಲ, ಆಧುನಿಕ ಸವಲತ್ತುಗಳನ್ನು ಆಶಿಸದೆ 12 ವರ್ಷಗಳ ಕಾಲ ವಾಹನ ಸಂಚಾರವನ್ನೇ ಮಾಡದೆ ಗ್ರಂಥ ರಚನೆ ಮಾಡಿದ್ದರು ಎನ್ನುವುದು ಬಹಳ ಉನ್ನತವಾದ ಮೌಲ್ಯ. ಜೈನ ಪರಂಪರೆ ಮತ್ತು ಅಧ್ಯಾತ್ಮದ ಮೌಲ್ಯಗಳನ್ನು ಹೇಳುವ ದವಳ ಮತ್ತು ಜಯದವಳ ಆಗಮ ಗ್ರಂಥಗಳನ್ನು ಶ್ರೀಗಳು ರಚನೆ ಮಾಡಿದ್ದಾರೆ ಎನ್ನುವುದನ್ನು ಕೇಳಿ ತಿಳಿದಿದ್ದೇನೆ.
1949ರಲ್ಲಿ ರತ್ನವರ್ಮರಾಗಿ ಕಾರ್ಕಳದ ವರಂಗ ಗ್ರಾಮದಲ್ಲಿ ಜನಿಸಿದ್ದ ಶ್ರೀಗಳು 1970ರಲ್ಲಿ ಶ್ರವಣಬೆಳಗೊಳದ ಪೀಠಾಧಿಪತಿಗಳಾಗಿ ಹೊಯ್ಸಳ ವಂಶದ ಚಾರುಕೀರ್ತಿ ಪಟ್ಟವನ್ನೂ ಪಡೆದರು. ಇವರು ತಮ್ಮ ಅವಧಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವನ್ನು 1981, 1993, 2006 ಮತ್ತು 2018 ರಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಇವರ ಅಧ್ಯಾತ್ಮದ ಸಾಧನೆ ನಮ್ಮ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಇವರ ಶಿಕ್ಷಣ ಕ್ಷೇತ್ರದ ಸಾಧನೆಗಳೂ ಹಲವು ತಲೆಮಾರುಗಳವರೆಗೂ ಬೆಳೆಯುತ್ತಲೇ ಇರುತ್ತದೆ. ಶ್ರೀಗಳ ನಿಧನ ಅತೀವ ನೋವು ತಂದಿದೆ. ಶ್ರೀಗಳ ಆತ್ಮಕ್ಕೆ ಶಾಂತಿ ಕೋರುತ್ತಾ, ಶ್ರದ್ದಾಂಜಲಿ ಸಲ್ಲಿಸುತ್ತೇನೆ ಎಂದಿದ್ದಾರೆ.
ReplyForward |
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ