ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸಕಾರದ ಉನ್ನತ ಶಿಕ್ಷಣ ಇಲಾಖೆ ಹಾಗೂ ಭಾರತದ ಬ್ರಿಟಿಷ್ ಹೈ ಕಮಿಷನ್ ಸಹಯೋಗದಲ್ಲಿ ಮಹಿಳಾ ಪದವೀಧರೆಯರಿಗೆ ಅಂತಾರಾಷ್ಟ್ರೀಯ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಚಿವೇನಿಂಗ್ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಡಂಬಡಿಕೆ ಸಹಿ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ ಅವರು ಚಾಲನೆ ನೀಡಿದರು.
ಸುವರ್ಣಸೌಧ ಮೂರನೇ ಮಹಡಿಯ ಸಭಾಂಗಣದಲ್ಲಿ ಡಿಸೆಂಬರ್ 16ರಂದು ನಡೆದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿ, ಚಿವೆನಿಂಗ್ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಜಾಗತಿಕ ಸಹಯೋಗದೊಂದಿಗೆ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ನಾಯಕತ್ವದ ಗುಣವನ್ನು ಉತ್ತೇಜಿಸುವ ಮೂಲಕ ವಿದ್ಯಾರ್ಥಿನಿಯರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕುವ ಉತ್ತಮ ಯೋಜನೆಯಾಗಿದೆ ಎಂದು ತಿಳಿಸಿದರು. ಜಾಗತಿಕವಾಗಿ ನಾವು ಬಲಿಷ್ಠರಾಗಲು ಶಿಕ್ಷಣವು ಸಹ ನಮಗೆ ಪ್ರಮುಖ ಅಸ್ತçವಾಗಿದೆ. ಉತ್ತಮವಾದ ವ್ಯಕ್ತಿತ್ವ ಹೊಂದಲು ಮತ್ತು ನಾಯಕತ್ವ ಗುಣದೊಂದಿಗೆ ವಿದ್ಯಾರ್ಥಿಗಳು ದೃಢವಾದ ಹೆಜ್ಜೆಯನ್ನಿಡಲು ಪರಿಣಾಮಕಾರಿಯಾದ ಶಿಕ್ಷಣದ ಅವಶ್ಯಕತೆಯಿದ್ದು, ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸುವ ಇಂತಹ ಒಡಂಬಡಿಕೆ ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಹೆಚ್ಚಿನ ಒತ್ತು ಕೊಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನರ್ ಚಂದ್ರು ಅಯ್ಯರ್ ಅವರು ಮಾತನಾಡಿ, ಮೂರು ವರ್ಷಗಳ ಈ ಕಾರ್ಯಕ್ರಮದ ಒಟ್ಟು ವೆಚ್ಚ ರೂ. 6 ಕೋಟಿಗಳಾಗಿದ್ದು, ಕರ್ನಾಟಕ ಸರ್ಕಾರವು ರೂ. 3 ಕೋಟಿ ಮತ್ತು ಉಳಿದ ಮೊತ್ತವನ್ನು ಯುನೈಟೆಡ್ ಕಿಂಗ್ಡಮ್ನ ಚಿವೇನಿಂಗ್ ಸೆಕ್ರೇಟರಿಯೇಟ್ನಿಂದ ಭರಿಸಲಾಗುತ್ತದೆ ಎಂದು ತಿಳಿಸಿದರು.ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ.ಅತೀಖ್ ಅವರು ಮಾತನಾಡಿ, ಚಿವೆನಿಂಗ್ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಕಾರ್ಯಕ್ರಮವು ವಿದ್ಯಾರ್ಥಿನಿಯರಿಗೆ ಸಾಕಷ್ಟು ಅನುಕೂಲಕರವಾಗಿದೆ. ವಿದ್ಯಾರ್ಥಿನಿಯರು ತಮ್ಮ ಇಚ್ಛೆಯ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಪಡೆಯಲು ಮಾನ್ಯತೆ ಪಡೆದ ಯುನೈಟೆಡ್ ಕಿಂಗ್ಡಮ್ನ ಯಾವುದೇ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಸುವರ್ಣವಕಾಶವನ್ನು ಈ ಯೋಜನೆ ಕಲ್ಪಿಸುತ್ತದೆ ಎಂದು ತಿಳಿಸಿದರು.
ವಿಶೇಷವಾಗಿ ಸರ್ಕಾರಿ ಕಾಲೇಜುಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆಯಲು ಈ ಕಾರ್ಯಕ್ರಮವು ಸದಾವಕಾಶ ಕಲ್ಪಿಸುತ್ತದೆ. ಶಿಕ್ಷಣ ಪಡೆಯುವುದು ಬರೀ ಉದ್ಯೋಗಕ್ಕಾಗಿ ಅಲ್ಲ; ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ದಾರಿದೀಪವಾಗುತ್ತದೆ ಎಂದು ತಿಳಿಸಿದರು. ಶಿಕ್ಷಣದಲ್ಲಿ ಬಂಡವಾಳ ಹೂಡುವುದು ಬಹಳ ಮಹತ್ವದ ಕಾರ್ಯವಾಗಿದ್ದು, ಈ ಕಾರ್ಯಕ್ರಮವು ಮಹತ್ವದ ಗುರಿಯೊಂದಿಗೆ ಸಾಗುವ ವಿದ್ಯಾರ್ಥಿಗಳ ಏಳ್ಗೆಗೆ ದಾರಿದೀಪವಾಗಿದೆ ಎಂದು ತಿಳಿಸಿದರು. ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಎನ್ ಅವರು ಪ್ರಾಸ್ತಾವಿಕ ಮಾತನಾಡಿ, ಯುನಿಟೆಡ್ ಕಿಂಗಡಮ್ನಲ್ಲಿ ಒಂದು ವರ್ಷದ ಸ್ನಾತಕೋತ್ತ ಪದವಿ ಪಡೆಯುವ ಮೂಲಕ ಕರ್ನಾಟಕದ ಸರ್ಕಾರಿ ಕಾಲೇಜುಗಳ ಪದವೀಧರೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಚಿವೆನಿಂಗ್ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಹೊಂದಿದೆ ಎಂದು ತಿಳಿಸಿದರು.
ಈ ವಿದ್ಯಾರ್ಥಿ ವೇತನವು 2024-2027 ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ 5 ಮಹಿಳಾ ಪದವೀಧರರಿಗೆ ಬೋಧನಾ ಶುಲ್ಕ, ಪ್ರಯಾಣ ಮತ್ತು ವಸತಿ ವೆಚ್ಚವನ್ನು ಸಂಪೂರ್ಣವಾಗಿ ಒಳಗೊಂಡಿರುತ್ತದೆ. 3 ವರ್ಷದಲ್ಲಿ ಒಟ್ಟು 15 ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯಲಿದ್ಧಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಬ್ರಿಟಿಷ್ ಹೈ ಕೌನ್ಸಿಲ್ನ ಸುಪ್ರಿಯಾ ಚಾವ್ಲಾ, ಮಂಜುನಾಥ ಕೆ.ಎನ್., ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್, ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ.ಶೋಭಾ ಜಿ., ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪಿ.ಎಂ.ತ್ಯಾಗರಾಜ್, ಕುಲ ಸಚಿವರಾದ ಸಂತೋಷ, ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ವಿ ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ