ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರತಿಯೊಂದು ಮಗುವಿಗೂ ಕಡ್ಡಾಯ ಶಿಕ್ಷಣವನ್ನು ನೀಡುವುದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಬಹುದು ಆದ್ದರಿಂದ ಪ್ರತಿಯೊಂದು ಮಗುವಿಗು ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್ ಲೋಕೇಶಕುಮಾರ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕರ ಯೋಜನೆ, ವಿವಿಧ ಇಲಾಖೆಗಳು, ಕಾರ್ಮಿಕ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ (ಜೂ.೧೨) ನಡೆದ ವಿಶ್ವ ಬಾಲ ಕಾರ್ಮಿಕರ ಪದ್ದತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಮಕ್ಕಳನ್ನು ಕೆಲಸದಿಂದ ಮುಕ್ತಗೊಳಿಸಿ ಅವರಿಗೆ ಉತ್ತಮ ಶಿಕ್ಷಣ ಒದಗಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದರಿಂದ ಬಾಲ ಕಾರ್ಮಿಕತ್ವವನ್ನು ತಡೆಗಟ್ಟಬಹುದು ಎಂದರು.
ಶಿಕ್ಷಣವೇ ಸಂಪತ್ತು ಶಿಕ್ಷಣವೇ ಶಕ್ತಿ ಎಂದು ಪ್ರತಿಪಾದಿಸಿದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಹಾಗೂ ಅವರು ವಿದ್ಯಾವಂತರಾಗಿ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ. ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಈ ರೀತಿಯಾಗಬಾರದು ಎಂದರು.
ಯಾವದೇ ವ್ಯಕ್ತಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಕೆಲಸದಲ್ಲಿ ತೊಡಗಿಸಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತರಾದ ಎ.ಎಚ್ ಉಮೇಶ ಅವರು ಮಾತನಾಡಿ ತಿಳುವಳಿಕೆ ಕೊರತೆಯೇ ಬಾಲ ಕಾರ್ಮಿಕ ಪದ್ಧತಿಗೆ ದಾರಿ ಮಾಡಿಕೊಡುತ್ತಿದೆ ಎಂದರು.
೧೪ ವರ್ಷದೊಳಗಿನ ಯಾವುದೇ ಮಕ್ಕಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬಾರದು ಒಂದು ವೇಳೆ ಮಾಡಿಕೊಂಡಿದ್ದೆಯಾದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಯೊಂದು ಮಗುವು ಶಿಕ್ಷಣವನ್ನು ಪಡೆದುಕೊಳ್ಳಬೇಕು ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
೧೦೦ ಕ್ಕೆ ನೂರರಷ್ಟು ಬಾಲ ಕಾರ್ಮಿಕತ್ವವನ್ನು ನಿರ್ಮೂಲನೆ ಮಾಡುವದು ನಮ್ಮ ಮುಖ್ಯ ಗುರಿಯಾಗಿದೆ. ಬಾಲ ಕಾರ್ಮಿಕತ್ವವನ್ನು ಸಮಾಜದಿಂದ ಹೊರದುಡುವುದಕ್ಕೆ ಸಮುದಾಯದ, ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಬೆಳಗಾವಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿಜಯ ದೇವರಾಜ ಅರಸ ಅವರು ಮಾತನಾಡಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಾಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಕೈಗಾರಿಕಾ ದೇಶಗಳಲ್ಲಿ ಬಾಲಕರನ್ನು ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಲಾಗುತ್ತದೆ ಎಂದರು.
ಶಾಲೆಗಳಲ್ಲಿ ಕೇವಲ ಶೈಕ್ಷಣಿಕ ವಿಷಯಗಳನ್ನು ಮಾತ್ರ ಭೊದನೆ ಮಾಡದೆ ಅವರು ನಮ್ಮ ಸಮಾಜಕ್ಕೆ ಉತ್ತಮವಾಗುವ ರೀತಿಯಲ್ಲಿ ಸಜ್ಜುಗೊಳಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಬೆಳಗಾವಿ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಂದೆ ತಾಯಿಗಳು ಹೇಳಿದ ವಾಖ್ಯ ತಪ್ಪು ಗುರುಗಳು ಹೇಳಿದ ವಾಕ್ಯ ಸರಿ ಎಂದು ಮಕ್ಕಳು ನಂಬಿರುತ್ತಾರೆ ಹಾಗಾಗಿ ಶಿಕ್ಷಕರಾದವರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು ಎಂದರು.
ಬಾಲ ಕಾರ್ಮಿಕ ಪದ್ದತಿಯನ್ನು ತಡೆಯಲು ಕೇವಲ ಅಧಿಕಾರಿಗಳಷ್ಟೇ ಅಲ್ಲದೆ ಇಡಿ ಸಮುದಾಯವೇ ಶ್ರಮಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲ ಕಾರ್ಮಿಕ ಮಕ್ಕಳಿಗೆ ಉಚಿತ ಪುಸ್ತಕ ಸಾಮಗ್ರಿಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು.
ಬಾಲ ಕಾರ್ಮಿಕ ಹಾಗೂ ಕಿಶೋರಾವಸ್ಥೆಯ ಪದ್ದತಿಯನ್ನು ತಡೆಗಟ್ಟಲು ಹಾಗೂ ನಿರ್ಮೂಲನೆಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೆನೆಂದು ಪ್ರತಿಜ್ಞಾವಿಧಿಯನ್ನು ಮಾಡಲಾಯಿತು.
ಮಹೇಶ್ವರಿ ಅಂದ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆಯನ್ನು ಹಾಡಿದರು.
ಕಾರ್ಮಿಕ ಅಧಿಕಾರಿಗಳಾದ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ಹಾಗೂ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ಜೋತಿ ಕಾಂತೆ ಅವರು ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ತಹಶೀಲ್ದಾರ ಮಂಜುಳಾ ನಾಯಕ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿಗ ಬಿ.ಆರ್ ಗಂಗಾಧರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಡಿ ಬಡಿಗೇರ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ನಿರಗಟ್ಟಿ, ಮಹಿಳಾ ಮತ್ತು ಮಕ್ಕಳ ಕಾರ್ಖಾನೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ರಾಠೋಡ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸಿಸ್ಟರ್ ಮೇರಿ ಜೆ, ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಸ್ ಕಿವಡಸನ್ನವರ, ಚೆಂಬರ್ಸ ಆಫ್ ಕಾಮರ್ಸ್ ಅಧ್ಯಕ್ಷರಾದ ಮಹೇಶ ಬಾಗಿ ಸೇರಿದಂತೆ ಇನ್ನುಳಿದ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.
ಜಾಥಾ ಕಾರ್ಯಕ್ರಮ:
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಜೆ ಸತೀಶ್ ಸಿಂಗ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್ ಲೋಕೇಶ್ ಕಮಾರ, ಉಪವಿಭಾಗಧಿಕಾರಿ ಕವಿತಾ ಯೋಗಪ್ಪನವರ, ಉಪ ಕಾರ್ಮಿಕ ಆಯುಕ್ತ ಎ.ಎಚ್ ಉಮೇಶ, ಬೆಳಗಾವಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿಜಯ ದೇವರಾಜ ಅರಸ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಡಿ ಬಡಿಗೇರ ಹಾಗೂ ಜಿ.ಎ ಹಾಗೂ ಶರ್ಮನ್ ಪ್ರೌಢಶಾಲೆ ವಿದ್ಯಾರ್ಥಿಗಳು ಸೇರಿದಂತೆ ಇತರ ಅಧಿಕಾರಿಗಳು ಜಾಥಾದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ