Latest

ಶಾಲೆಗಳ ಆರಂಭ ಸುತ್ತೋಲೆ ಅಧಿಕೃತವಲ್ಲ -ಸುರೇಶ ಕುಮಾರ್

ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ – ಶಾಲೆಗಳ ಆರಂಭ ಕುರಿತಂತೆ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುತ್ತೋಲೆ ಅಧಿಕೃತವಾದದ್ದಲ್ಲ. ಅದು ಕೇವಲ ಸಭೆಯಲ್ಲಿ ವ್ಯಕ್ತವಾದ ಅನಿಸಿಕೆಗಳು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಜುಲೈ 1ರಿಂದ ಶಾಲೆಗಳು 3 ಹಂತದಲ್ಲಿ ಆರಂಭವಾಗುತ್ತವೆ ಎನ್ನುವ ಸುತ್ತೋಲೆ ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ಆದರೆ ಅದು ಸರಕಾರ ಹೊರಡಿಸಿರುವ ಅಧಿಕೃತ ಸುತ್ತೋಲೆ ಅಲ್ಲ. ಶಾಲೆಗಳನ್ನು ಆರಂಭಿಸುವ ಕುರಿತು ಇನ್ನೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Related Articles

ಶಾಲೆಗಳನ್ನು ಆರಂಭಿಸುವ ಕುರಿತಂತೆ ಪಾಲಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯಾಧ್ಯಾಪಕರು ಸೇರಿದಂತೆ ಎಲ್ಲರ ಅಭಿಪ್ರಾಯ ಸಂಗ್ರಹಿಸುವಂತೆ ಕೇಂದ್ರ ಸರಕಾರ ತಿಳಿಸಿದೆ. ಇದೇ 10 ರಿಂದ 12ರ ವರೆಗೆ ಅಭಿಪ್ರಾಯ ಸಂಗ್ರಹಿಸಲು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸುರೇಶ ಕುಮಾರ ತಿಳಿಸಿದರು.

ಶಾಲೆಗಳನ್ನು ಆರಂಭಿಸಬೇಕೋ ಬೇಡವೋ ಎನ್ನುವ ಬಗ್ಗೆ ಪಾಲಕರ ಅಭಿಪ್ರಾಯ ಪಡೆಯಲಾಗುವುದು. ನಂತರ ಶಾಲೆ ಆರಂಭಿಸುವ ದಿನಾಂಕ ನೋಡಿಕೊಂಡು ಸಿಗುವ ಶೈಕ್ಷಣಿಕ ಕಾಲಾವಧಿ ಗಮನಿಸಿ ಪಠ್ಯಕ್ರಮ ಕಡಿತ ಮಾಡುವ ಬಗ್ಗೆ ನಿರ್ಧರಿಸಲಾಗುವುದು. ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾವುದಕ್ಕೂ ಅವಸರ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.

Home add -Advt

ಜುಲೈ 1ರಿಂದ 3 ಹಂತದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು, ಪಾಳಿ ಆಧಾರದ ಮೇಲೆ ಅಥವಾ ಪಾಲಕರಿಂದ ಬರುವ ಸಲಹೆಯಂತೆ ಶಾಲೆ ಆರಂಭಿಸಲಾಗುವು, ಶಿಕ್ಷಕರು ಜೂನ್ 5ರಿಂದ ಶಾಲೆಗೆ ಹಾಜರಾಗಬೇಕು ಎನ್ನುವ ಅಂಶಗಳು ನಿನ್ನೆಯಿಂದ ಹರಿದಾಡುತ್ತಿರುವ ಸುತ್ತೋಲೆಯಲ್ಲಿ ಇದ್ದವು. ಶಿಕ್ಷಕರು ಕೂಡ ಜೂ.5ರಿಂದ ಹಾಜರಾಗುವ ಬಗ್ಗೆ ತೀವ್ರ ಗೊಂದಲಕ್ಕೊಳಗಾಗಿದ್ದರು. ಆದರೆ ಈ ಸುತ್ತೋಲೆ ಅಧಿಕೃತ ಸುತ್ತೋಲೆ ಅಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೆ ಅಧಿಕೃತವಲ್ಲದ ಸುತ್ತೋಲೆಗಳು, ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರನ್ನೂ ಗೊಂದಲಕ್ಕೆ ನೂಕುತ್ತಿವೆ. ಈ ಬಗ್ಗೆ ಸರಕಾರ ಕಠಿಮ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ. ಬೆಲ್ ಐಕಾನ್ ಪ್ರೆಸ್ ಮಾಡಿ ಸಬ್ ಸ್ಕ್ರೈಬ್ ಮಾಡಿ)

Related Articles

Back to top button