
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮತ್ತೆ ಡ್ರಗ್ಸ್ ಹಾಗೂ ಬಿಟ್ ಕಾಯಿನ್ ವಿಚಾರ ಚರ್ಚೆಗೆ ಬಂದಿದ್ದು, ಪ್ರಕರಣದಲ್ಲಿ ಭಾಗಿಯಾದ ಯಾರೇ ಇರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಖಚಿತ, ರಾಜಿ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಉಪಚುನಾವಣೆಯಲ್ಲಿ ಸೋಲಿನ ಭೀತಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಟ್ ಕಾಯಿನ್ ದಂಧೆಯಲ್ಲಿ ಆಡಳಿತ ಪಕ್ಷದ ಪ್ರಭಾವಿಗಳು ಶಾಮೀಲು ಎಂದು ಆರೋಪಿಸುತ್ತಿದ್ದಾರೆ. ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಯಾವುದೇ ಗೊಂದಲವಿಲ್ಲ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ 2 ವರ್ಷಗಳಿಂದ ಅತಿ ಹೆಚ್ಚು ಡ್ರಗ್ಸ್ ಪ್ರಕರಣ ದಾಖಲಾಗಿವೆ. ವಶಪಡಿಸಿಕೊಂಡ ಡ್ರಗ್ಸ್ ನಲ್ಲಿ ಶೇ.50ರಷ್ಟು ನಾಶ ಮಾಡಿದ್ದೇವೆ. ಡ್ರಗ್ಸ್ ಹಾಗೂ ಬಿಟ್ ಕಾಯಿ ಪ್ರಕರಣದ ಆರೋಪಿ ಶ್ರೀಕೃಷ್ಣ ವಿರುದ್ಧ 2018ರಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೂ ಆತನನ್ನು ಬಂಧಿಸಿರಲಿಲ್ಲ.ಯುಬಿ ಸಿಟಿಯಲ್ಲಿ ದಾಂಧಲೆ ನಡೆದಾಗಲೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರೆ ಇಲ್ಲಿಯವರೆಗೆ ಬಂದು ನಿಲ್ಲುತ್ತಿರಲಿಲ್ಲ ಎಂದು ಹೇಳಿದರು.
ಅಂದು ಅದ್ಯಾವ ಕಾರಣಕ್ಕೆ ಶ್ರೀಕೃಷ್ಣನನ್ನು ಬಂಧಿಸಿಲ್ಲವೋ ಗೊತ್ತಿಲ್ಲ. ನಾವು 2020ರಲ್ಲಿ ಡ್ರಗ್ಸ್ ವಿರುದ್ಧ ಸಮರ ಸಾರಿದೆವು. ಶ್ರೀಕೃಷ್ಣನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ಶ್ರೀಕೃಷ್ಣನ ಜೊತೆಗೆ ಹಲವು ಪ್ರಭಾವಿಗಳನ್ನು ಬಂಧಿಸಲಾಯಿತು. ಡಾರ್ಕ್ ವೆಬ್, ಹಣಕಾಸು ಸಂಸ್ಥೆಗಳ ಹ್ಯಾಕರ್ ಆಗಿರುವ ಶ್ರೀಕೃಷ್ಣನ ವಿರುದ್ಧ ಹಲವು ಕೇಸ್ ಗಳು ದಾಖಲಾಗಿದ್ದು, 2021ರಲ್ಲಿ ಇಡಿ ತನಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಕೇಸ್ ತನಿಖೆಯಲ್ಲಿ ಯಾವುದೇ ಗೊಂದಲಗಳಿಲ್ಲ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿಚಾರದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತಷ್ಟು ಏರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ