ಪ್ರೌಢ ಶಾಲೆ ಪುನಾರಂಭ ದಿನಾಂಕ ಪ್ರಕಟಿಸಿದ ಸಿಎಂ ಬೊಮ್ಮಾಯಿ; ನಾಳೆ ಉನ್ನತ ಮಟ್ಟದ ಸಭೆ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :  ಫೆಬ್ರವರಿ 14 ರಿಂದ ಪ್ರೌಢ ಶಾಲೆಗಳನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿಕ್ಷಣ ಹಾಗೂ ಗೃಹ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಇಂದು ನಡೆದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

*ನಾಳೆ ಉನ್ನತ ಮಟ್ಟದ ಸಭೆ :*
‘ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ನಾಳೆ ಸಂಜೆ ಎಲ್ಲ ಸಚಿವರು, ಡಿಸಿ, ಎಸ್‍ಪಿ, ಸಿಇಓಗಳೊಂದಿಗೆ ಸಭೆ ನಡೆಸಲಿದ್ದು, ಜಿಲ್ಲೆಗಳಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಲಾಗುವುದು. ನಾನು, ಶಿಕ್ಷಣ ಹಾಗೂ ಗೃಹ ಸಚಿವರು ನಿರಂತರ ಸಂಪರ್ಕದಲ್ಲಿರದ್ದೇವೆ. ಹಿರಿಯ ಅಧಿಕಾರಿಗಳು ಕೂಡ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ ’ ಎಂದರು.

ಉಚ್ಛನ್ಯಾಯಾಲಯದ ಆದೇಶ ಬರುವವರೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಶಿಕ್ಷಣವನ್ನು ಮುಂದುವರೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಬಾರಿ ಶಾಲೆಗಳು ಪ್ರಾರಂಭವಾದಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

*ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕು:*
ಶಾಲೆಗಳ ವಸ್ತ್ರ ಸಂಹಿತೆಯ ಕುರಿತು ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿವಾದವು ಉಚ್ಛ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಎಲ್ಲರೂ ಶಾಂತಿ ಕಾಪಾಡಿ ನ್ಯಾಯಾಲಯದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕಾಗುತ್ತದೆ ಎಂದರು.

ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಮಕ್ಕಳಲ್ಲಿ ಗೊಂದಲ ಕಡಿಮೆಯಾಗಿದೆ. ಕಳೆದ ಯಾವುದೇ ಅಹಿತಕರ ಘಟನೆ ಎಲ್ಲಿಯೂ ನಡೆದಿಲ್ಲ. ಕೆಲವು ದೃಶ್ಯಾವಳಿಗಳು ಕಳೆದ 2 ದಿನಗಳಿಂದ ಹರಿದಾಡುತ್ತಿವೆ. ಹೊರಗಡೆಯಿಂದ ಆಗುವ ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ತ್ರ್ರಿಸದಸ್ಯ ಪೀಠದ ಮುಂದೆ ವಿಚಾರಣೆಯಲ್ಲಿ ಪ್ರತಿದಿನ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಅಲ್ಲಿಯವರೆಗೆ ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಶಾಂತಿ ಕಾಪಾಡಲು ಕಾಲೇಜಿನಲ್ಲಿ ಯಾವುದೇ ಧಾರ್ಮಿಕವಾದ ಬಟ್ಟೆಯನ್ನು ಹಾಕಿಕೊಳ್ಳುವುದು ಬೇಡ ಎಂಬ ಸೂಚನೆ ನೀಡಿದ್ದಾರೆ. ಶಾಲೆಗಳು ಪ್ರಾರಂಭಿಸುವಂತೆಯೂ ನ್ಯಾಯಾಲಯ ಸೂಚನೆ ನೀಡಲಾಗಿದೆ ಎಂದರು.

*ವಿದ್ಯಾರ್ಥಿಗಳಿಗೆ ಧನ್ಯವಾದ:*
ವಿದ್ಯಾರ್ಥಿಗಳು ಒಗ್ಗಟ್ಟಾಗಿ ವಿದ್ಯಾರ್ಜನೆ ಮಾಡಬೇಕು. ಶಾಲೆಗಳ ಹಾಗೂ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಅವರಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

ಬೆಳಗಾವಿ, ಹಾವೇರಿ, ಧಾರವಾಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button