
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರು
ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ: ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಕುಟುಂಬದವರು ಬೇಡಿಕೆ ಮತ್ತು ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾವುಕರಾದ ಘಟನೆ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳುಬಾಳು ಬೃಹನ್ಮಠದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ತರಳುಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ನಡೆಯಿತು.

ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಶ್ರೀಮಠದಿಂದ ಸನ್ಮಾನಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭಾವುಕರಾದರು. ವೀರಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸಿರಿಗೆರೆ ತರಳುಬಾಳು ಬೃಹನ್ಮಠದಿಂದ ಸನ್ಮಾನ ಮಾಡಲಾಯಿತು. ತಲಾ ರೂ.50 ಸಾವಿರ ರೂಪಾಯಿಗಳಂತೆ ಒಟ್ಟು ಒಂಭತ್ತು ಕುಟುಂಬಗಳಿಗೆ ಶ್ರೀಮಠದ ವತಿಯಿಂದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ಸೈನಿಕರ ಪತ್ನಿಯರು ಕುಂದುಕೊರತೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳಿಗೆ ನೀಡಿದರು. ಈ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
ಈ ಮನವಿಗಳನ್ನು ಸ್ವೀಕರಿಸಿದಾಗ ಸಿಎಂ ಕಣ್ಣಂಚಿನಲ್ಲಿ ನೀರು ಕಂಡು ಬಂತು. ನಂತರ ಆ ಮನವಿಗಳನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗೆ ನೀಡಿ ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದರು.