*ಸಿಎಂ ಅವರನ್ನು ಬೆಳಗಾವಿಗೆ ಕರೆಸಿ ಪ್ರಮುಖ ಯೋಜನೆಗಳ ಚಾಲನೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಹದಿನೈದಕ್ಕೂ ಹೆಚ್ಚು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಒಂದೇ ಬಾರಿಗೆ ಚಾಲನೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳು ಘೋಷಿಸಿ ಒಂದು ಕಳೆದರೂ ಚಾಲನೆ ದೊರೆಯುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಜೆಟ್ ನಲ್ಲಿ ಯೋಜನೆ ಘೋಷಿಸಿದರೆ ಮುಂದಿನ ಬಜೆಟ್ ನಲ್ಲಿ ದುಡ್ಡು ದೊರೆಯುತ್ತದೆ. ವ್ಯವಸ್ಥೆನೆ ಹಿಗೇ ಇದ್ದಾಗ ನಾವೇನು ಮಾಡಲು ಸಾಧ್ಯವಿಲ್ಲವೆಂದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ 75 ಕೋಟಿ ರೂ. ಪತ್ರಿಕಾ ಭವನಕ್ಕೆ 10 ಕೋಟಿ ರೂ, ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ 215 ಕೋಟಿ ರೂ, ಹುದಲಿ ಆರ್‌ಓಬಿಗೆ 35 ಕೋಟಿ ರೂ. ಗೋಕಾಕನ ಲೋಳಸೂರು ಸೇತುವೆಗೆ 40 ಕೋಟಿ ರೂ. ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಮಾರ್ಚ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆಯಿಂದ ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೇತುವೆ ನಿರ್ಮಿಸಿಲ್ಲ, ಆದ್ದರಿಂದ ಅಗತ್ಯಕ್ಕನುಗುಣವಾಗಿ ಖಾನಾಪುರ ತಾಲೂಕಿನಲ್ಲಿ ಮೂರು, ಕಾಗವಾಡ ತಾಲೂಕಿನಲ್ಲಿ ಒಂದು, ನಿಪ್ಪಾಣಿ ತಾಲೂಕಿನಲ್ಲಿ ಎರಡು ಸೇತುವೆ ದೊಡ್ಡ ಪ್ರಮಾಣದ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ನಾನು ಅಧಿಕಾರ ವಹಿಸಿಕೊಂಡಾಗ ಕಳೆದ ಹತ್ತು, ಹನೈರಡು ವರ್ಷಗಳ ಹಿಂದೆ ರಾಜ್ಯಕ್ಕೆ ನೀಡಿದ ರಾಜ್ಯ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ 48 ಕಾಮಗಾರಿಗಳು ವಿವಿಧ ಕಾರಣಗಳಿಂದ ನಿಂತಿದ್ದವು, 39 ರಸ್ತೆ ಅಭಿವೃದ್ಧಿ ಯೋಜನೆಗಳ ಸಮಸ್ಯೆ ಪರಿಹರಿಸಿದ್ದು, ಇನ್ನುಳಿದ ಕಾಮಗಾರಿಗಳಲ್ಲಿ ಮೂರು ಕೋರ್ಟ್‌ನಲ್ಲಿ ಪ್ರಕರಣ ಚಾಲ್ತಿಯಲ್ಲಿವೆ. ಈ ಎಲ್ಲಾ ವಿಷಯವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವರಿಕೆ ಮಾಡಿದ್ದು, ಬರುವ ದಿನಗಳಲ್ಲಿ ರಾಜ್ಯಕ್ಕೆ ಇನ್ನುಷ್ಟು ಯೋಜನೆಗಳನ್ನು ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕಾವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
400 ಕೋಟಿ ರೂಪಾಯಿ ಸಾಗಿಸುತ್ತಿದ್ದ ಕಂಟೇನರನ್ನು ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ 2025ರ ಅ. 16 ರಂದು ನಡೆದ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ನಮ್ಮಪೊಲೀಸರಿಗೆ ಸಹಕಾರ ಕೇಳಿದರೆ ಖಂಡಿತ ನೀಡುತ್ತಾರೆ. ಆದರೆ ಈ ಪ್ರಕರಣ ಕುರಿತು ಯಾವುದೇ ಅಧಿಕೃತ ಮಾಹಿತಿಗಳನ್ನು ಮಹಾರಾಷ್ಟ್ರ ಪೊಲೀಸರು ನೀಡಿಲ್ಲವೆಂದರು ತಿಳಿಸಿದರು.
ಈ ಪ್ರಕರಣಕ್ಕೆ ಕರ್ನಾಟಕ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಸಹಕರಿಸುತ್ತಿಲ್ಲ. ಘಟನೆ ಬಗ್ಗೆ ದೂರು ಕೊಟ್ಟರೆ ನಮ್ಮವರೆ ತನಿಖೆ ಮಾಡುತ್ತಾರೆ. ಆದರೆ ಘಟನೆ ನಡೆದ ಸ್ಥಳ ಮಹಾರಾಷ್ಟ್ರ, ಗೋವಾ ಅಥವಾ ಕರ್ನಾಟಕಕ್ಕೆ ಸೇರಿದ್ದಾ ಎಂಬ ಬಗ್ಗೆ ಗೊಂದಲ ಇದೆ ಎಂದರು. 400 ಕೋಟಿ ಕಾಂಗ್ರೆಸ್‌ಗೆ ಸೇರಿದ ಹಣ ಎಂಬ ಮಹಾರಾಷ್ಟ್ರ ಸಿಎಂ ಆರೋಪ ವಿಚಾರಕ್ಕೂ ಪ್ರತಿಕ್ರಿಯಿಸಿದ ಸಚಿವರು, ಹಣ ಎಣಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಎಲ್ಲಿ ಘಟನೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಅಲ್ಲಿ ನಿಜವಾಗಿ ಏನಾಗಿದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.




