CrimeFilm & EntertainmentKannada NewsKarnataka News

*ನಿಗೂಢವಾಗಿ ಸಾವನ್ನಪ್ಪಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ*

ಪ್ರಗತಿವಾಹಿನಿ ಸುದ್ದಿ: ಕಿರುತೆರೆಯ ಜನಪ್ರಿಯ ಕಾಮಿಡಿ ಶೋಗಳ ಮೂಲಕ ಕರ್ನಾಟಕದ  ಮನೆಮಾತಾಗಿದ್ದ ಹಾಸ್ಯ ಕಲಾವಿದ ಸಿದ್ದು ಉರ್ಫ್ ಸಿದ್ಧಾರ್ಥ್ ಪರಸನೂರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಬೀದರ್ ಜಿಲ್ಲೆಯ ನಿವಾಸಿಯಾಗಿದ್ದ ಸಿದ್ದು ಅವರು ಹುಮ್ನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ವಾಸವಿದ್ದರು. ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿ ಸಿದ್ದು ಅವರ ಮೃತದೇಹ ಪತ್ತೆಯಾಗಿದ್ದು ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಿದ್ದು ಅವರದ್ದು ಸಹಜ ಸಾವಲ್ಲ, ಇದರ ಹಿಂದೆ ಬೇರೇನೋ ರಹಸ್ಯವಿದೆ ಎಂದು ಸ್ಥಳೀಯರು ಹಾಗೂ ಅವರ ಅಭಿಮಾನಿಗಳು ತೀವ್ರ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಿದ್ದು ಅವರು ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ. ಆದರೆ, ಅಸಲಿ ಕಾರಣವೇನು ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ.

ಇನ್ನು ಘಟನೆಗೆ ಸಂಬಂಧಿಸಿದಂತೆ ಸದ್ಯ ಹುಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ತೇಜಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಿದ್ದು ಅವರ ನಿಗೂಢ ಸಾವಿನ ಹಿಂದಿರುವ ಅಸಲಿ ಸತ್ಯ ಹೊರಬರಬೇಕಿದೆ.

Home add -Advt

ಕಲರ್ಸ್ ಕನ್ನಡ ವಾಹಿನಿಯ ‘ಮಜಾ ಭಾರತ’ರಿಯಾಲಿಟಿ ಶೋ ಮೂಲಕ ಸಿದ್ದು ಅವರು ಅಪಾರ ಜನಪ್ರಿಯತೆ ಗಳಿಸಿದ್ದರು. ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಉತ್ತರ ಕರ್ನಾಟಕ ಶೈಲಿಯ ಸಹಜ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಿದ್ದರು. ಮಜಾ ಭಾರತದ ಯಶಸ್ಸಿನ ನಂತರ ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಶೋನಲ್ಲೂ ಕಾಣಿಸಿಕೊಂಡು ಭೇಷ್ ಎನಿಸಿಕೊಂಡಿದ್ದರು.

ಕಿರುತೆರೆ ಮಾತ್ರವಲ್ಲದೆ ಬೆಳ್ಳಿಪರದೆಗೂ ಕಾಲಿಟ್ಟಿದ್ದ ಸಿದ್ದು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ಯುವ ನಟನ ಹೀಗೊಂದು ನಿಗೂಢ ಅಂತ್ಯ ಇಡೀ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕ ಕಣ್ಣೀರಲ್ಲಿ ಮುಳುಗುವಂತೆ ಮಾಡಿದೆ.

Related Articles

Back to top button