ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ: ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ಡಿಎಂಕೆಯೊಂದಿಗಿನ ಮೈತ್ರಿಯಿಂದ ಹೊರಬರಬೇಕು; ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಒಂದೆಡೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಅದನ್ನು ವಿರೋಧಿಸುವ ಡಿಎಂಕೆ ಜತೆಗೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಡಿಎಂಕೆಯೊಂದಿಗೆ ಮಾಡಿಕೊಂಡ ಹೊಂದಾಣಿಕೆಯಿಂದ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಡಿಎಂಕೆ ವಿರೋಧಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದ್ದು, ಕಾಂಗ್ರೆಸ್ ಈ ಬಗ್ಗೆ ದಂದ್ವ ನಿಲುವು ಅನುಸರಿಸುತ್ತಿದೆ. ಕಾಂಗ್ರೆಸ್ 2019 ರಿಂದಲೂ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ನಾವು ಆಗಲೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಜ್ಯದಲ್ಲಿ ಪಾದಯಾತ್ರೆ ಮಾಡುವ ಬದಲು ಡಿಎಂಕೆ ಜೊತೆ ಮಾತುಕತೆ ನಡೆಸಿ ಎರಡೂ ರಾಜ್ಯಗಳಿಗೂ ಅನುಕೂಲವಾಗುವಂತೆ ಮಾಡಿ ಎಂದು ಹೇಳಿದ್ದೇವು. ಅವರು ಪಾದಯಾತ್ರೆ ಮಾಡುವ ರಾಜಕೀಯ ನಾಟಕ ಮಾಡಿದರು. ನಾವು ಈ ಪ್ರಕರಣ ಕೋರ್ಟ್ ನಲ್ಲಿದೆ ಅಂತ ಹೇಳಿದಾಗ ಸಿದ್ದರಾಮಯ್ಯ ಅವರು, ಇಲ್ಲ ಎಂದು ವಾದ ಮಾಡಿದ್ದರು. ಆದರೆ, ಈಗ ಅವರು ಅಧಿಕಾರದಲ್ಲಿದ್ದಾರೆ. ಪ್ರಕರಣ ಕೋರ್ಟ್ ನಲ್ಲಿದೆ ಅಂತ ಹೇಳುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರ ಅಸಮಾಧಾನ ಶಮನಗೊಳಿಸಲಾಗುವುದು, ಅವರಿಗೂ ಮೋದಿಯವರು ಪ್ರಧಾನಿಯಾಗಬೇಕು ಎಂಬ ಬಯಕೆ ಇದೆ. ಹೀಗಾಗಿ ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡಿ, ಸಮಾಧಾನ ಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವರೊಬ್ಬ ಪಕ್ಷದ ಹಿರಿಯ ನಾಯಕರಾಗಿದ್ದು, ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೋವಾಗುವುದು ಸಹಜ. ಈಶ್ವರಪ್ಪ ಸೇರಿದಂತೆ ಕರಡಿ ಸಂಗಣ್ಣ, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರೊಂದಿಗೆ ಪಕ್ಷದ ವರಿಷ್ಠರು ಮಾತುಕತೆ ಮಾಡಿ ಸಮಾಧಾನಪಡಿಸಲಿದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಸಿಗುತ್ತಿಲ್ಲ. ಸಚಿವರಿಗೆ ಸ್ಪರ್ಧಿಸಲು ಸೂಚನೆ ನೀಡಿದಾಗ ಅವರು ಸೋಲುವ ಭಯದಿಂದ ಸ್ಪರ್ಧೆ ಮಾಡಿ, ಹೀಗಾಗಿ ಸಚಿವರ ಮಕ್ಕಳಿಗೆ ಟಿಕೆಟ್ ಕೊಡುವ ದುಸ್ಥಿತಿ ಬಂದಿದೆ. ಅದರಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ