ಕೇಜ್ರಿವಾಲ್ ತೀರಾ ದುರಹಂಕಾರ ತೋರಿದ್ರು: 9 ಬಾರಿ ಸಮನ್ಸ್ ನೀಡಿದರೂ ಹಾಜರಾಗಿಲ್ಲ – ಕೇಂದ್ರ ಸಚಿವ ಪ್ರಹ್ಲಾದ ಜೋಶಿ
-ಕಾನೂನು ತನ್ನ ಕ್ರಮ ಕೈಗೊಂಡಿದೆ ಅಷ್ಟೇ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಅಬಕಾರಿ ನೀತಿ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಧ ದಿಲ್ಲಿ ಸಿಎಂ ಕೇಜ್ರಿವಾಲ್ ಬಂಧನ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಅತಿ ಹೆಚ್ಚು ಅಂದರೆ 9 ಬಾರಿ ಸಮನ್ಸ್ ಕೊಟ್ಟಿದೆ. ಸ್ಪಂದಿಸದಿದ್ದಾಗ ಕಾನೂನು ರೀತಿಯ ಕ್ರಮವಾಗಿದೆ ಎಂದು ಪ್ರತಿಕ್ರಿಯಿಸಿದರು.
ಕೇಜ್ರಿವಾಲ್ ತೀರಾ ದುರಹಂಕಾರಿ ಪ್ರವೃತ್ತಿ ತೋರಿದ್ದಾರೆ. ಇಡಿ ಸಾಕಷ್ಟು ಸಮಯ, 9 ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದೇ ಇದ್ದಿದ್ದರಿಂದ ಕಾನೂನು ತನ್ನ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೂ ದಿಲ್ಲಿ ಸಿಎಂ ಕೇಜ್ರಿವಾಲ್ ಸರಿಯಾದ ಮಾಹಿತಿಯನ್ನು ಕೊಡಲಿಲ್ಲ. ಹೈಕೋರ್ಟ್ಗೆ ಹೋದರು. ನಿಮ್ಮ ರಕ್ಷಣೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು. ನಿನ್ನೆಯೂ ಸಹ ವಿಚಾರಣೆಗೆ ಸಹಕರಿಸಿಲ್ಲ. ಹಾಗಾಗಿ ಬಂಧನವಾಗಿದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.
ಪಿಎಂಲ್ ಯಾಕ್ಟ್ ತುಂಬಾ ಬಿಗಿ ಇದ್ದು, ಯಾರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಡೀ ದೇಶದಲ್ಲೇ ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇರುವುದಿಲ್ಲ. ಇಡಿ ಅಧಿಕಾರಿಗಳು, ಕಾನೂನು ತನ್ನ ಕೆಲಸ ತಾನು ಮಾಡುತ್ತದೆ ಅಷ್ಟೇ ಎಂದು ಹೇಳಿದರು.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ನಿರ್ಮೂಲನ ಆಂದೋಲನದ ಮೂಲಕ ಅಧಿಕಾರಕ್ಕೆ ಬಂದ ದಿಲ್ಲಿ ಸಿಎಂ ಕೇಜ್ರಿವಾಲ್ ಅವರಿಂದ ಇಂಥ ಭ್ರಷ್ಟಾಚಾರವನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ