*ಏಳು ಜಿಲ್ಲೆಗಳಲ್ಲಿ ಕಲ್ಯಾಣ ಪಥ ಚತುಷ್ಪಥ ರಸ್ತೆ ನಿರ್ಮಾಣ: ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕವನ್ನು ಬೆಸೆಯುವ, ಉತ್ತರದಿಂದ ದಕ್ಷಿಣ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಬೀದರ್-ಚಾಮರಾಜನಗರ ಹೆದ್ದಾರಿ ಕಲ್ಯಾಣ ಪಥ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯವು ಕಲ್ಯಾಣ-ಕರ್ನಾಟಕ ಪ್ರದೇಶಗಳಾದ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 453ರಡಿ ಪರಿಷತ್ತಿನಲ್ಲಿ ಡಿ.10ರಂದು ಸದಸ್ಯರಾದ ಶಶಿಲ್ ಜಿ. ನಮೋಶಿ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಲ್ಯಾಣ ಪಥ ಯೋಜನೆಯನ್ನು ಕೆ.ಆರ್.ಆರ್.ಡಿ.ಎ ದಿಂದ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಕಲ್ಯಾಣ ಪಥ ಯೋಜನೆಯಡಿ ಒಟ್ಟು 1124.70 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು ರೂ. 1000 ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿದ್ದು, 2025-26ನೇ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಒಟ್ಟು 286 ಕಾಮಗಾರಿಗಳನ್ನು ಕೈಗೊಂಡಿದ್ದು, 281 ಕಾಮಗಾರಿಗಳು ಪ್ರಗತಿಯಲ್ಲಿವೆ. 05 ಕಾಮಗಾರಿಗಳು ಟೆಂಡರ್ ಪ್ರಕ್ರಿಯಯಲ್ಲಿದೆ. ಈಗಾಗಲೇ 75 ಕಿ.ಮೀ ಉದ್ದವನ್ನು ಪೂರ್ಣಗೊಳಿಸಿದ್ದು, ರೂ.150 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕೆಆರ್‍ಆರ್‍ಡಿಎ ವರದಿ ನೀಡಿದೆ ಎಂದು ಸಚಿವರು ತಿಳಿಸಿದರು.
ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಅಂಶವಾಗಿರುವುದರಿಂದ ಗ್ರಾಮೀಣ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಅಗತ್ಯತೆ ಇರುತ್ತದೆ. ಗ್ರಾಮೀಣ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವುದರಿಂದ ಗ್ರಾಮೀಣ ಭಾಗದ ಜನರಿಗೆ ಜಿಲ್ಲಾ/ತಾಲ್ಲೂಕು ಕೇಂದ್ರಕ್ಕೆ ಹಾಗೂ ಮಾರುಕಟ್ಟೆ/ಆಸ್ಪತ್ರೆ/ ಶೈಕ್ಷಣಿಕ ಕೇಂದ್ರಗಳಿಗೆ ಸಂಪರ್ಕ ದೊರಕಲಿದ್ದು ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾಗುವುದು. ಈ ಹಿನ್ನೆಲೆಯಲ್ಲಿ ಕಲ್ಯಾಣ ಪಥ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.



