*ಗ್ರಾಹಕರೆ ಇರಲಿ ಎಚ್ಚರ: ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ನಂದಿನಿ ಬ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿ ಬೃಹತ್ ಜಾಲವೊಂದನ್ನು ಸಿಸಿಬಿ ಪೊಲೀಸರು ಮತ್ತು ಕೆಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿವೆ.
ಈ ದಾಳಿಯಲ್ಲಿ ಕೆಎಂಎಫ್ ವಿತರಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಮಹೇಂದ್ರ, ದೀಪಕ್, ಮುನಿರಾಜು, ಅಭಿ ಅರಸು ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು 1.26 ಕೋಟಿ ರೂ. ಮೌಲ್ಯದ ವಸ್ತುವನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರಿನಿಂದ ತಮಿಳುನಾಡಿಗೆ ಶುದ್ಧ ನಂದಿನಿ ತುಪ್ಪ ಪೂರೈಕೆ ಮಾಡುತ್ತಿದ್ದರು. ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಒರಿಜಿನಲ್ ತುಪ್ಪ ಖರೀದಿಸುತ್ತಿದ್ದರು. ಇಲ್ಲಿ ಖರೀದಿಸಿದ ಒರಿಜಿನಲ್ ತುಪ್ಪವನ್ನು ತಮಿಳುನಾಡಿಗೆ ಕಳುಹಿಸುತ್ತಿದ್ದರು. ಅಲ್ಲಿ ಒಂದು ಲೀಟರ್ ತುಪ್ಪಕ್ಕೆ 4 ಲೀಟರ್ ನಕಲಿ ತುಪ್ಪ ಬೆರೆಸುವ ಮೂಲಕ ಕಲಬೆರಕೆ ಮಾಡುತ್ತಿದ್ದರು. ಜೊತೆಗೆ ಫಾಮ್ ಆಯಿಲ್, ತೆಂಗಿನ ಎಣ್ಣೆ ಮತ್ತು ಡಾಲ್ಡಾ ಬೆರೆಸುತ್ತಿದ್ದರು. ಬಳಿಕ ಮತ್ತೆ ಕರ್ನಾಟಕಕ್ಕೆ ತಂದು ಮಾರಾಟ ಮಾಡುತ್ತಿದ್ದರು.
ನ.14 ರಂದು ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್‌ಪ್ರೈಸಸ್ ಮಾಲೀಕರಿಗೆ ಸೇರಿದ ಗೋಡೌನ್ ಹಾಗೂ ಅಂಗಡಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದಾಳಿ ವೇಳೆ ಒಟ್ಟು 8,136 ಲೀಟರ್ ಕಲಬೆರಕೆ ತುಪ್ಪ 4 ವಾಹನ ಹಾಗೂ ಫಾಮ್ ಆಯಿಲ್, ನಕಲಿ ತುಪ್ಪ ತಯಾರು ಮಾಡುವ ಯಂತ್ರಗಳು ಸೇರಿ 1 ಕೋಟಿ 26 ಲಕ್ಷದ 95 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.



