ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು ಎರಡೂವರೆ ತಿಂಗಳ ಕಾಲ ಸಂಪೂರ್ಣ ಭಾರತವನ್ನು ಲಾಕ್ ಡೌನ್ ಮಾಡಿರುವ ಕೊರೋನಾದಿಂದಾಗಿ ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸುಮಾರು 6 ತಿಂಗಳಷ್ಟು ಹಿಂದಕ್ಕೆ ಹೋಗಿವೆ.
ಮಳೆಗಾಲ ಆರಂಭಕ್ಕೆ ಮೊದಲು ಬಹುಪಾಲು ಕಾಮಗಾರಿಗಳನ್ನು ಮುಗಿಸಬೇಕೆನ್ನುವ ಗುರಿ ಇಟ್ಟುಕೊಂಡು ಹಲವು ಪಟ್ಟು ವೇಗವಾಗಿ ಕೆಲಸ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಸ್ಮಾರ್ಟ್ ಸಿಟಿ ಯೋಜನೆಗೆ ಕೊರೋನಾ ದೊಡ್ಡ ಪೆಟ್ಟು ನೀಡಿದೆ.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಆರಂಭದಿಂದಲೂ ಬಾಲಗ್ರಹ ಪೀಡೆ ತಗುಲಿದೆ. ಹಲವು ಬಾರಿ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆ, ಕೇಂದ್ರ, ರಾಜ್ಯ ಸರಕಾರದ ರಾಜಕೀಯ ಲೆಕ್ಕಾಚಾರ, ತಾಂತ್ರಿಕ ಸಮಸ್ಯೆಗಳು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ವೇಗ ಪಡೆದಿರಲಿಲ್ಲ. ಆದರೆ ಕಳೆದ ಸುಮಾರು 6 ತಿಂಗಳಿನಿಂದ ಕಾಮಗಾರಿ ವೇಗ ಪಡೆದಿತ್ತು.
ಬಹುಪಾಲು ಕಾಮಗಾರಿಗಳನ್ನು ಜೂನ್ ಹೊತ್ತಿಗೆ ಒಂದು ಹಂತಕ್ಕೆ ತರುವ ಮತ್ತು ಡಿಸೆಂಬರ್ ಮೊದಲು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಹೊಂದಿದ್ದರು. ಅದರಂತೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾಮಗಾರಿಗೆ ವೇಗ ನೀಡುವುದಕ್ಕಾಗಿ ಯಂತ್ರ ಮತ್ತು ಮಾನವಸಂಪನ್ಮೂಲಗಳನ್ನು ಹಲವು ಪಟ್ಟು ಹೆಚ್ಚಿಸಿದ್ದರು.
ಆದರೆ ಮಾರ್ಚ್ ಮಧ್ಯಭಾಗ ಬರುತ್ತಿದ್ದಂತೆ ಕೊರೋನಾ ಹಾವಳಿ ಆರಂಭವಾಯಿತು. ಲಾಕ್ ಡೌನ್ ನಿಂದಾಗಿ ಕಾಮಗಾರಿ ಸಂಪೂರ್ಣ ಸ್ಥಗಿತವಾಯಿತು. ಬೇರೆ ಬೇರೆ ಭಾಗಗಳಿಂದ ಬಂದಿದ್ದ ಕೆಲಸಗಾರರು ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಯಿತು. ಯಂತ್ರಗಳೂ ನಿಂತಲ್ಲೇ ನಿಂತವು. 2 ತಿಂಗಳೂ ಪೂರ್ಣ ಕೆಲಸ ಸ್ಥಗಿತಗೊಂಡಿತು.
ಇದೀಗ ಕೆಲಸವೇನೋ ಪುನಾರಂಭವಾಗಿದೆ. ಆದರೆ ಮೊದಲಿನ ವೇಗ ನೀಡಲು ಹಲವು ವಿಘ್ನಗಳು ಉಂಟಾಗಿವೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಬಹುಪಾಲು ಕೆಲಸಗಾರರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಸ್ಥಳೀಯ ಕೆಲಸಗಾರರಿಂದ ಎಲ್ಲ ಕೆಲಸಗಳನ್ನೂ ಮಾಡಿಸಲು ಸಾಧ್ಯವಿಲ್ಲ.
ಅನೇಕ ಕೆಲಸಗಳಿಗೆ ತಾಂತ್ರಿಕ ಸಿಬ್ಬಂದಿಯೇ ಸಿಗುತ್ತಿಲ್ಲ. ಸಾಮಗ್ರಿಗಳೂ ಸರಿಯಾದ ರೀತಿಯಲ್ಲಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಂಕ್ರಾಮಿಕ ರೋಗ ಅಪ್ಪಳಿಸಿದ್ದರಿಂದಾಗಿ ಗುತ್ತಿಗೆದಾರರ ಮೇಲೂ ಒತ್ತಡ ಹೇರಲು ಸಾಧ್ಯವಿಲ್ಲ.
ಇನ್ನು ಮಳೆಗಾಲವೂ ಬಾಗಿಲಿಗೆ ಬಂದು ನಿಂತಿದೆ. ಯಾವುದೇ ಕ್ಷಣದಲ್ಲಿ ಮಳೆ ಆರಂಭವಾಗಬಹುದು. ಆಗ ಎಲ್ಲ ಕೆಲಸಗಳನ್ನೂ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಮಾರ್ಚ್ ಮಧ್ಯಭಾಗದಲ್ಲಿ ಸ್ಥಗಿತವಾದ ಕಾಮಗಾರಿಗಳು ಮತ್ತೆ ಸರಿಯಾದ ವೇಗ ಪಡೆಯುವುದು ಅಕ್ಟೋಬರ್ ಹೊತ್ತಿಗೇ ಆಗಬಹುದು.
ಇದರಿಂದಾಗಿ ಒಟ್ಟಾರೆ ಕಾಮಗಾರಿಗಳು ನಿಗದಿಗಿಂತ 6 ತಿಂಗಳಷ್ಟು ವಿಳಂಬವಾಗಿ ಮುಕ್ತಾಯವಾಗುವ ಸಾಧ್ಯತೆ ಇದೆ.
ಈಗ ಕಾಮಾಗಾರಿಗಳನ್ನು ಪುನಾರಂಭಿಸಲಾಗಿದೆ. ಆದರೆ ತಾಂತ್ರಿಕ ಪರಿಣಿತರು ತಮ್ಮ ತಮ್ಮ ಊರುಗಳಿಗೆ ಮರಳಿರುವುದರಿಂದ ಕೆಲವು ನಿರ್ಧಿಷ್ಟ ಕೆಲಸಗಳಿಗೆ ಸಿಬ್ಬಂದಿ ಸಿಗುತ್ತಿಲ್ಲ. ಹಾಗಾಗಿ ನಮ್ಮ ಗುರಿಯ ಪ್ರಕಾರ ಕಾಮಗಾರಿ ಮುಗಿಸಲು ಆಗುವುದಿಲ್ಲ. ಆದರೂ ಗುಣಮಟ್ಟದೊಂದಿಗೆ ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.
-ಶಶಿಧರ ಕುರೇರ, ಸ್ಮಾರ್ಟ್ ಸಿಟಿ ಎಂಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ