ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ನಿಗಮ ಮಂಡಳಿ ನೇಮಕದ ಮೊದಲ ಪಟ್ಟಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮನೆಯಲ್ಲಿ ತಳಮಳ ಶುರುವಾಗಿದೆ.
ಪಟ್ಟಿಯಲ್ಲಿ ಹೆಸರು ಸೇರದವರಷ್ಟೆ ಅಲ್ಲ, ಸೇರಿದವರೂ ಅಸಮಾಧಾನ ಹೊರಹಾಕುತ್ತಿದ್ದಾರೆ. ತಮ್ಮ ಬೆಂಬಲಿಗರಿಗೆ ಸ್ಥಾನ ಸಿಕ್ಕಿಲ್ಲ ಎಂದು ಮುಖಂಡರೂ ಅಸಮಾಧಾನಗೊಂಡಿದ್ದಾರೆ.
ಸಧ್ಯದ ಮಾಹಿತಿ ಪ್ರಕಾರ, ನಿಗಮ ಮಂಡಳಿಯ ಕಾರ್ಯಕರ್ತರ ಪಟ್ಟಿ ಬಿಡುಗಡೆಯಾಗುವ ಮುನ್ನವೇ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಲಕ್ಷಣ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ , ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಶುಕ್ರವಾರ ಬಿಡುಗಡೆಯಾದ 35 ಶಾಸಕರ ಪಟ್ಟಿಯಲ್ಲಿ ಹೆಸರು ಸೇರದ್ದಕ್ಕೆ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಇನ್ನು ಕೆಲವರು, ನಮಗೆ ನಿಗಮ ಮಂಡಳಿ ಬೇಕಿಲ್ಲ. ಸಚಿವ ಸಂಪುಟ ಪುನಾರಚನೆ ವೇಳೆ ನಮ್ಮ ಹೆಸರು ಪರಿಗಣಿಸಬೇಕು. ಈಗ ನಿಗಮ ಮಂಡಳಿ ಕೊಟ್ಟರೆ ನಂತರ ಸಂಪುಟ ಸೇರಲು ಅವಕಾಶವಿರುವುದಿಲ್ಲ. ಹಾಗಾಗಿ ನಿಗಮ ಮಂಡಳಿ ಅಧ್ಯಕ್ಷಸ್ಥಾನ ಬೇರೆ ಶಾಸಕರಿಗೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನು ಕೆಲವರು ತಮಗೆ ನೀಡಿರುವ ನಿಗಮ ಮಂಡಳಿ ಸರಿ ಇಲ್ಲ, ಕೆಲಸವಿಲ್ಲದ ಮಂಡಳಿ ಪಡೆದು ಏನು ಮಾಡಬೇಕು ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.
ಒಟ್ಟಾರೆ, ಕಾರ್ಯಕರ್ತರ ಪಟ್ಟಿ ಬಿಡುಗಡೆಗೂ ಮುನ್ನವೇ ಎದ್ದಿರುವ ಅಸಮಾಧಾನ ಎರಡನೇ ಪಟ್ಟಿ ಬಿಡುಗಡೆ ಮಾಡಿದರೆ ಹೇಗೆ ಸ್ಫೋಟಗೊಳ್ಳಬಹುದು ಎನ್ನುವ ಮುನ್ಸೂಚನೆ ನೀಡಿದೆ. ಹಾಗಾಗಿ ಮೇಲ್ಮಟದಲ್ಲೇ ಸರಿಪಡಿಸುವ ಕೆಲಸ ಶುರುವಾಗಿದೆ.
ಹೈಕಮಾಂಡ್ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಟ್ಟಿ ಸಿದ್ದಪಡಿಸುವುದು ಸರಿಯಲ್ಲ ಎಂದು ಈ ಹಿಂದೆಯೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಶನಿವಾರ ಬೆಳಗ್ಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮನೆಗೆ ದೌಡಾಯಿಸಿದ್ದಾರೆ. ಇಬ್ಬರೂ ಸೇರಿ ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಮಧ್ಯೆ, ವಿಧಾನ ಪರಿಷತ್ತಿನ ಕೆಲವು ಸದಸ್ಯರು ನಮ್ಮನ್ನೂ ನಿಗಮ ಮಂಡಳಿ ಪಟ್ಟಿಗೆ ಪರಿಗಣಿಸಿ ಎನ್ನುವ ಬೇಡಿಕೆ ಮಂಡಿಸಿದ್ದಾರೆ.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಗಮ ಮಂಡಳಿ ಬೆಂಕಿ ಕಾಂಗ್ರೆಸ್ ಗೆ ಹೊಡೆತ ನೀಡಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪಕ್ಷ ತ್ಯಜಿಸಿರುವುದು ಕೂಡ ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಈ ಎಲ್ಲ ಬೆಳವಣಿಗೆಗಳನ್ನು ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ ಹೇಗೆ ನಿಬಾಯಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ