Kannada NewsKarnataka News

ರಮೇಶ ಜಾರಕಿಹೊಳಿ ಸುತ್ತ ಆಕಾಂಕ್ಷಿಗಳ ದಂಡು; ಮಾಜಿ ಸಚಿವರ ಕೈಗೇ ಈ ಬಾರಿ ಬಿಜೆಪಿ ಬಿ ಫಾರ್ಮ್?

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಇಲ್ಲಿರುವ ಫೋಟೋ ಗಮನಿಸಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸುತ್ತ ನಿಂತಿರುವವರನ್ನು ನೋಡಿ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳೆಲ್ಲ ಅವರನ್ನು ಸುತ್ತುವರಿದಿದ್ದಾರೆ.

 

ಬಲಬದಿಗೆ ಕಿರಣ ಜಾಧವ – ಅವರು ಬೆಳಗಾವಿ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಅವರ ಪಕ್ಕದಲ್ಲಿ ನಿಂತಿರುವ ದೀಪಾ ಕುಡಚಿ, ಸಂಜಯ ಪಾಟೀಲ, ಎಡಕ್ಕೆ ನಿಂತಿರುವ ಧನಂಜಯ ಜಾಧವ ಹಾಗೂ ನಾಗೇಶ ಮನ್ನೊಳಕರ್ ಇವರೆಲ್ಲ ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು.

ಇದು ಕಳೆದ ವಾರ ರಾಜಹಂಸಗಡಕ್ಕೆ ರಮೇಶ ಜಾರಕಿಹೊಳಿ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೋ. ಬೆಳಗಾವಿಯ ಗ್ರಾಮೀಣ ಮತ್ತು ದಕ್ಷಿಣ ಕ್ಷೇತ್ರದ ಆಕಾಂಕ್ಷಿಗಳೆಲ್ಲೆ ರಮೇಶ ಜಾರಕಿಹೊಳಿ ಸುತ್ತುವರೆದು ನಿಂತಿದ್ದಾರೆ. ರಮೇಶ ಜಾರಕಿಹೊಳಿ ಈ ಬಾರಿ ವಿಧಾನಸಭೆ ಚುುನಾವಣೆಯಲ್ಲಿ ತಮಗೆ ಟಿಕೆಟ್ ಕೊಡಿಸಿಯೇ ಕೊಡಿಸುತ್ತಾರೆ ಎನ್ನುವ ಬಲವಾದ ನಂಬಿಕೆ ಇವರೆಲ್ಲರದ್ದು.  ಕಳೆದ ಹಲವು ತಿಂಗಳಿನಿಂದ ಇವರೆಲ್ಲ ರಮೇಶ ಜಾರಕಿಹೊಳಿ ಸುತ್ತ ಓಡಾಡುತ್ತಿದ್ದಾರೆ.

ರಮೇಶ ಜಾರಕಿಹೊಳಿ ಕೂಡ ಆನೆ ನಡೆದಿದ್ದೇ ದಾರಿ ಎನ್ನುವಂತೆ ಜಿಲ್ಲೆಯಲ್ಲಿ ಓಡಾಡುತ್ತಿದ್ದಾರೆ. ರಮೇಶ ಜಾರಕಿಹೊಳಿ ಅಭಿಮಾನಿಗಳ ಸಂಘದ ಹೆಸರಲ್ಲಿ ಸಮಾವೇಶಗಳನ್ನು ನಡೆಸುತ್ತಿದ್ದಾರೆ.

ಈ ಬಾರಿ ವಿಧಾನಸಭೆ ಚುನಾವಣೆ ರಮೇಶ ಜಾರಕಿಹೊಳಿ ನೇತೃತ್ವದಲ್ಲೇ ನಡೆಯುತ್ತದೆ ಎಂದು ಕೆಲವು ತಿಂಗಳ ಹಿಂದೆ ಗೋಕಾಕಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಹೇಳಿದ್ದರು. ಅಂದರೆ, ಬೆಳಗಾವಿ ಜಿಲ್ಲೆಯ ಎಲ್ಲ 18 ಕ್ಷೇತ್ರಗಳ ಬಿ ಫಾರ್ಮ್ ರಮೇಶ ಜಾರಕಿಹೊಳಿ ಕೈಸೇರುತ್ತದೆ. ಅವರು ನಿರ್ಧರಿಸುವವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಜನಸಾಮಾನ್ಯರು ಹಾಗೂ ಬಿಜೆಪಿಯ ಕಾರ್ಯಕರ್ತರು, ಟಿಕೆಟ್ ಆಕಾಂಕ್ಷಿಗಳೆಲ್ಲ ಅರ್ಥಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲೇ ಈ ಆಕಾಂಕ್ಷಿಗಳೆಲ್ಲ ರಮೇಶ ಜಾರಕಿಹೊಳಿ ಬೆನ್ನು ಬಿದ್ದಿರುವಂತಿದೆ.

ರಮೇಶ ಜಾರಕಿಹೊಳಿ ಕೂಡ 2 -3 ಬಾರಿ ಬಹಿರಂಗ ಭಾಷಣ ಮಾಡುವಾಗ ಬಿಜೆಪಿ ಮುಂದೆ ತಮಗೆ ಬಹು ದೊಡ್ಡ ಜವಾಬ್ದಾರಿ ನೀಡಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು. ಮುಂದೆ ದೊಡ್ಡ ಜವಾಬ್ದಾರಿ ಕೊಡುವುದಕ್ಕಾಗಿಯೇ ತಮ್ಮ ತಾಳ್ಮೆ ಪರೀಕ್ಷಿಸಲು ಮಂತ್ರಿಸ್ಥಾನ ಕೊಟ್ಟಿಲ್ಲದಿರಬಹುದು ಎಂದೂ ಹೇಳಿಕೆ ನೀಡಿದ್ದರು. ಅಂದರೆ ಬಿಜೆಪಿ ಸೂಕ್ಷ್ಮವಾಗಿ ಅವರಿಗೆ ಅಂತಹ ಸೂಚನೆಯನ್ನು ಕೊಟ್ಟಿದೆಯೇ? ಎನ್ನುವ ಅನುಮಾನ ಮೂಡುವಂತಾಗಿದೆ.

ರಮೇಶ ಜಾರಕಿಹೊಳಿ ಈ ಬಾರಿ ಚುನಾವಣೆಗೆ ಬಹಳ ಲೆಕ್ಕಾಚಾರದ ಹೆಜ್ಜೆ ಇಡುತ್ತಿದ್ದಾರೆ. ಒಂದಿಷ್ಟು ಶಾಸಕರು ತಮ್ಮ ಕೈಯೊಳಗೆ ಇರುವಂತೆ ಅವರು ಯೋಜನೆ ರೂಪಿಸುತ್ತಿದ್ದಾರೆ. ಒಂದೊಮ್ಮೆ ಅತಂತ್ರ ವಿಧಾನಸಭೆ ರಚನೆಯಾದರೆ ತಾವೇ ಕಿಂಗ್ ಮೇಕರ್ ಆಗಬೇಕೆನ್ನುವ ಯೋಚನೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಕೆಲವು ದಿನಗಳ ಹಿಂದೆ ಗೋಕಾಕ ನಗರಸಭೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಈ ಬಾರಿ ಬಿಜೆಪಿ ಸರಕಾರವೇ ಬರುತ್ತದೆ. ಕೆಲವು ಸ್ಥಾನ ಕೊರತೆಯಾದರೂ ಹೇಗಾದರೂ ಮಾಡಿ ಸರಕಾರ ಮಾಡುತ್ತೇವೆ, ಯಾರಿಗೂ ಅನುಮಾನ ಬೇಡ ಎಂದು ಹೇಳಿದ್ದರು.

ಇತ್ತೀಚೆಗೆ ಅರಬಾವಿ ಶಾಸಕರೂ, ರಮೇಶ ಜಾರಕಿಹೊಳಿ ಅವರ ಸಹೋದರರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರ ಬಳಿ ಪತ್ರಕರ್ತರು, ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತದೆಯೇ ಎಂದು ಕೇಳಿದಾಗ, ಎಲ್ಲರಿಗೂ ನಮಸ್ಕಾರ ಎಂದು ಹೇಳಿ ಹೊರಟುಹೋಗಿದ್ದರು.

ಒಟ್ಟಾರೆ, ಕಳೆದ ವಿಧಾನಸಭೆಯ ಅವಧಿಯಲ್ಲಿ ಆಗಿರುವ ಹಿನ್ನಡೆಗೆ ಪ್ರತೀಕಾರವಾಗಿ ಮುಂದಿನ ಬಾರಿ ತಮ್ಮ ತಾಖತ್ತು ತೋರಿಸುವ ಉದ್ದೇಶವನ್ನು ರಮೇಶ ಜಾರಕಿಹೊಳಿ ಹೊಂದಿರುವಂತಿದೆ. ಹಾಗಾಗಿ ತಮ್ಮ ಟಾರ್ಗೆಟ್ ಕ್ಷೇತ್ರಗಳನ್ನು ಪಟ್ಟಿ ಮಾಡಿ, ಅಲ್ಲಿ ಹೆಚ್ಚು ಓಡಾಡುತ್ತಿದ್ದಾರೆ. ವಿಶೇಷವಾಗಿ ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಅಥಣಿ, ಕುಡಚಿ, ನಿಪ್ಪಾಣಿ  ಕ್ಷೇತ್ರಗಳಲ್ಲಿ ರಮೇಶ ಜಾರಕಿಹೊಳಿ ಹೆಚ್ಚು ಆಸಕ್ತಿ ಹೊಂದಿರುವಂತಿದೆ.  ಬಿಜೆಪಿಯ ಹಿರಿಯ ನಾಯಕರು, ಕಾರ್ಯಕರ್ತರು ಅವರಿಗೆ ಎಷ್ಟರಮಟ್ಟಿಗೆ ಸಾಥ್ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಜೆಪಿ ಚುನಾವಣೆ ಉಸ್ತುವಾರಿ ಕಾರ್ಯ ಶುರು: ಬೊಮ್ಮಾಯಿ ಅಪ್ಪಿ, ಮುದ್ದಾಡಿದ ಧರ್ಮೇಂದ್ರ ಪ್ರಧಾನ್

https://pragati.taskdun.com/bjp-election-in-charge-work-begins-dharmendra-pradhan-hugs-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button