Karnataka NewsLatestPolitics

*ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಡಿನ್ನರ್ ಮೀಟಿಂಗ್ ಮೂಲಕ ಬಲ ಪ್ರದರ್ಶನ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ಅದರ ಅಗತ್ಯ ನನಗಿಲ್ಲ. ನನ್ನ ಹಿಂದೆ ಯಾರೂ ಬರುವುದು ಬೇಡ, ನನ್ನ ಪರವಾಗಿ ಯಾರು ಮಾತನಾಡುವುದೂ ಬೇಡ. ನಾನು ಸಿಎಂ ಸೇರಿದಂತೆ 140 ಶಾಸಕರದೂ ಒಂದೇ ಗುಂಪು. ಅದು ಕಾಂಗ್ರೆಸ್ ಗುಂಪು. ಯಾವುದೇ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡಬೇಡಿ” ಎಂದು ತಿಳಿಸಿದರು.

ಪ್ರೀತಿಯಿಂದ ಊಟಕ್ಕೆ ಕರೆದರೆ ಬರಲ್ಲ ಅನ್ನಲು ಆಗುತ್ತದೆಯೇ

Home add -Advt

ನಿನ್ನೆ ಡಿನ್ನರ್ ಸಭೆ ಮಾಡಿದ್ದೀರಿ ಎಂದು ಕೇಳಿದಾಗ, “ನಾನು ಯಾವುದೇ ಡಿನ್ನರ್ ಮೀಟಿಂಗ್ ಮಾಡಿಲ್ಲ. ದೊಡ್ಡಣ್ಣನವರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು. ನನ್ನ ಸ್ನೇಹಿತರೂ ಹೌದು. ಅವರದು ದೊಡ್ಡ ಕುಟುಂಬ. ಕಳೆದ 15 ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಮ್ಮ ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುತ್ತದೆಯೇ? ಹೀಗಾಗಿ ನಾನೂ ಸೇರಿದಂತೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದೆವು, ಅಷ್ಟೇ. ಅವರಿಗೆ ಗೌರವ ನೀಡುವ ಉದ್ದೇಶದಿಂದ ಅವರ ಮನೆಗೆ ಹೋಗಿದ್ದೆ. ಇದರ ಹೊರತಾಗಿ ಬೇರೇನೂ ಇಲ್ಲ” ಎಂದು ತಿಳಿಸಿದರು.

“ದಿನ ಒಬ್ಬೊಬ್ಬ ಸ್ಥಳೀಯರು, ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಿದ್ದಾರೆ. ಊಟವನ್ನು ಬೇಡ ಎನ್ನಲು ಆಗುತ್ತದೆಯೇ? ಪ್ರೀತಿಯಿಂದ ಕರೆಯುತ್ತಾರೆ, ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ಇದು ಯಾವ ಔತಣಕೂಟವೂ ಅಲ್ಲ, ಏನೂ ಅಲ್ಲ. ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ಮನೆಯಿಂದ ಇವತ್ತು ಮುದ್ದೆ, ಉಪ್ಸಾರು ಊಟ ಮಾಡಿ ಕಳಿಸುತ್ತೇವೆ ಎನ್ನುತ್ತಿದ್ದಾನೆ. ಹೀಗೇ ಅವರು ಪ್ರೀತಿಯಿಂದ ಹೇಳಿದಾಗ, ಕರೆದಾಗ ಬೇಡ ಎನ್ನಲು ಆಗುತ್ತದೆಯೇ? ನಾಳಿದ್ದು ನಮ್ಮ ಆಸೀಫ್ ಸೇಠ್, ಫಿರೋಜ್ ಸೇಠ್ ಅವರು ಊಟಕ್ಕೆ ಕರೆದಿದ್ದಾರೆ” ಎಂದರು

ಸಿಎಂ ಹುದ್ದೆ ವಿಚಾರವಾಗಿ ಯತೀಂದ್ರ ಅವರು ಪದೇ ಪದೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ” ಎಂದರು.

ಮತ ಕಳ್ಳತನ ವಿರುದ್ಧ ಪ್ರತಿಭಟನೆಗಾಗಿ ದೆಹಲಿಗೆ ಪ್ರಯಾಣ

“ಮತ ಕಳ್ಳತನ ವಿರುದ್ಧದ ಹೋರಾಟದಲ್ಲಿ ಭಾಗವಹಿಸಲು ಶನಿವಾರ ದೆಹಲಿಗೆ ತೆರಳುತ್ತಿದ್ದೇನೆ. ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲೇ ಮತ ಕಳ್ಳತನ ವಿರುದ್ಧ ಹೋರಾಟ ಆರಂಭಿಸಿದರು. ನಾವು 2023ರಲ್ಲೇ ಚಿಲುಮೆ ಅಕ್ರಮದ ಮೂಲಕ ಮತ ಕಳ್ಳತನವನ್ನು ಪತ್ತೆ ಮಾಡಿದ್ದೆವು. ನಾನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರೆಲ್ಲರೂ ಚುನಾವಣಾ ಆಯೋಗಕ್ಕೆ ದೂರು ನೀಡಿ ಹೋರಾಟ ಮಾಡಿದೆವು. ನಂತರ ನಾವು ವಿಧಾನಸಭೆ ಚುನಾವಣೆಯಲ್ಲಿ ಗೆದ್ದೆವು. ಲೋಕಸಭೆ ಚುನಾವಣೆ ಸಮಯದಲ್ಲಿ ಆಗಿರುವ ಮತ ಕಳ್ಳತನವನ್ನು ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ಜನರ ಮುಂದಿಟ್ಟಿದ್ದಾರೆ. ಚುನಾವಣಾ ಆಯೋಗವು ನಿರ್ದಿಷ್ಟ ರಾಜಕೀಯ ಪಕ್ಷದ ಅಸ್ತ್ರವಾಗಿದ್ದು, ನಾವು ಅದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈ ವಿಚಾರವಾಗಿ ರಾಜ್ಯದಲ್ಲಿ ನಡೆಸಿದ ಸಹಿ ಸಂಗ್ರಹ ಅಭಿಯಾನದಲ್ಲಿ 1.43 ಕೋಟಿ ಸಹಿ ಸಂಗ್ರಹವಾಗಿದ್ದು, ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿರುವ ಬಗ್ಗೆ ಕೇಳಿದಾಗ, “ಬೆಂಗಳೂರಿನ ಗೌರವ ಉಳಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮುಂದೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದೇವೆ” ಎಂದು ತಿಳಿಸಿದರು.

“ಈ ವಿಚಾರದಲ್ಲಿ ಕುನ್ಹಾ ಅವರ ಸಮಿತಿಯ ಶಿಫಾರಸ್ಸುಗಳನ್ನು ಗೌರವಿಸಬೇಕು. ಈ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಜವಾಬ್ದಾರಿಯನ್ನು ಗೃಹ ಸಚಿವ ಪರಮೇಶ್ವರ್ ಅವರಿಗೆ ವಹಿಸಲಾಗಿದೆ. ಗೃಹ ಸಚಿವರು ಕೆಎಸ್ ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಕೂತು ಚರ್ಚೆ ಮಾಡಲಿದ್ದಾರೆ” ಎಂದು ತಿಳಿಸಿದರು.

Related Articles

Back to top button