Politics

*ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ದಸರಾ ಮೆರವಣಿಗೆ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಜನಪ್ರತಿನಿಧಿಯಿಲ್ಲದ ಚನ್ನಪಟ್ಟಕ್ಕೆ ಸಾಲು, ಸಾಲು ಅಭಿವೃದ್ಧಿ ಕಾರ್ಯಗಳನ್ನು ನೀಡುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಡೀ ದಿನ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಬಿರುಸಿನ ಸಂಚಾರ ನಡೆಸಿದರು. ಮುಖ್ಯಮಂತ್ರಿಗಳು ಚನ್ನಪಟ್ಟಣಕ್ಕೆ ನೀಡಿರುವ 300 ಕೋಟಿ ವಿಶೇಷ ಅನುದಾನದಲ್ಲಿ ಶುಭ ಶುಕ್ರವಾರದಂದು ಒಟ್ಟು ರೂ 60.57 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಗುರುವಾರ ನಡೆದಿದ್ದ ದಸರಾ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಅವರು ಚುನಾಯಿತ ಪ್ರತಿನಿಧಿಯಿಲ್ಲದ ಕ್ಷೇತ್ರದಲ್ಲಿ ಪಿಆರ್ ಇ ಮತ್ತು ಮುಖ್ಯಮಂತ್ರಿಗಳ ವಿಶೇಷ ಅನುದಾನ ಮತ್ತು ಬೃಹತ್ ಮತ್ತು ಮಾಧ್ಯಮ ನೀರಾವರಿ ಇಲಾಖೆ ಅನುದಾನದ ಅಡಿ ಅಭಿವೃದ್ಧಿಯ ದಸರಾಗೆ ಚಾಲನೆ ನೀಡಿದರು.

ಕ್ಷೇತ್ರದಾದ್ಯಂತ ಸುಮಾರು 17 ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದಗೆರೆ, ಮತ್ತಿಕೆರೆ, ಸಂಕಲಗೆರೆ, ದೊಡ್ಡ ಮಳೂರು, ಮಳೂರು, ಚಕ್ಲುರು, ಸುಳ್ಳೇರಿ ಪರಿಮಿತಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, 5 ಕಡೆ ಸೇತುವೆ ನಿರ್ಮಾಣ ಹಾಗೂ 4 ಕಡೆ ರಸ್ತೆ ನಿರ್ಮಾಣಕ್ಕೆ ಹಾಗೂ ಒಂದು ಕಡೆ ಅರಸು ಸಮುದಾಯ ಭವನಕ್ಕೆ ಒಟ್ಟು 20 ಕ್ಕೂ ಹೆಚ್ಚು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಮೊದಲಿಗೆ ಬೇವೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಾಕಳಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು “ಸುಮಾರು ₹ 2.16 ಕೋಟಿ ಅನುದಾನ ಹಾಗೂ ಈ ಗ್ರಾಮಕ್ಕೆ 78 ಮನೆಗಳನ್ನು ನಮ್ಮ ಸರ್ಕಾರ ಈ ಗ್ರಾಮಕ್ಕೆ ಮಂಜೂರು ಮಾಡಿದೆ” ಎಂದರು

20 ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಭೇಟಿ

“ಮಾಜಿ ಎಂಎಲ್ ಎ ಅವರು ನಿಮ್ಮ ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ? ನಾನು ಕಳೆದ ಮೂರು ತಿಂಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ನಮ್ಮ ಕೆಲಸವನ್ನು ನೀವು ಮರೆಯಬಾರದು. ಚನ್ನಪಟ್ಟಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಗುರಿ” ಎಂದು ಹೇಳಿದರು.

ಸಿಎಸ್ ಆರ್ ಅನುದಾನದ ಅಡಿ ನಿರ್ಮಾಣವಾದ ಮೂರು ಶಾಲೆಗಳ ಉದ್ಘಾಟನೆ

ಚಕ್ಕೆರೆ ಹಾಗೂ ಕೋಡಂಬಳ್ಳಿಯಲ್ಲಿ ಟೊಯೋಟಾ ಕಿರ್ಲೊಸ್ಕರ್ ಕಂಪನಿಯ ಸಿಎಸ್ ಆರ್ ಅನುದಾನದ ಅಡಿ ನಿರ್ಮಾಣ ಮಾಡಿರುವ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಿದರು.

ನಾಗವಾರ ಗ್ರಾಮದಲ್ಲಿ ಟೊಯೋಟಾ ಫೈನಾನ್ಸಿಯಲ್ ಸರ್ವಿಸ್ ಆಫ್ ಇಂಡಿಯಾ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿಗಳನ್ನು ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದಲೇ ಟೇಪು ಕತ್ತರಿಸಿ ಉದ್ಘಾಟನೆ ಮಾಡಿಸಿದರು. ನಂತರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿ ಗ್ರಾಮ ಪಂಚಾಯತಿಗಳಿಗೂ 100- 150 ಮನೆಗಳು ಮಂಜೂರು

“2.80 ಕೋಟಿ ವೆಚ್ಚದ ಸಿ. ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರಿಂದಲೇ ಗುದ್ದಲಿ ಪೂಜೆ ಮಾಡಿಸಿ “116 ಮನೆಗಳನ್ನು ನಿಮ್ಮ ಗ್ರಾಮಕ್ಕೆ ಮಂಜೂರು ಮಾಡಲಾಗಿದೆ. ಪ್ರತಿ ಪಂಚಾಯತಿಗೂ 100- 150 ಮನೆಗಳನ್ನು ಮಂಜೂರು ಮಾಡಲಾಗುವುದು” ಎಂದರು.

ಬೇವೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲಗೆರೆ ಆದಿಶಕ್ತಿ ದೇವಸ್ಥಾನದ ಬಳಿ 2.54 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ “101 ಮನೆಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಅರ್ಜಿಗಳನ್ನು ಸ್ವೀಕರಿಸಿತ್ತು. ನಿಮಗೆ ಅಂದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ” ಎಂದರು.

ಪ್ರತಿ ಗ್ರಾಮದಲ್ಲಿ ಕಾಮಗಾರಿಗಳನ್ನು ಆಯಾಯಾ ಗ್ರಾಮದ ಹಿರಿಯ ನಾಗರೀಕರು, ಮಹಿಳೆಯರಿಂದ ಉದ್ಘಾಟನೆಯನ್ನು ಡಿಸಿಎಂ ನೆರವೇರಿಸುತ್ತಿದ್ದುದ್ದು ವಿಶೇಷವಾಗಿತ್ತು.

ಎಂ. ಬಿ ಹಳ್ಳಿ ಗ್ರಾಮ ಪಂಚಾಯತಿಯ ಅವ್ವೆರಹಳ್ಳಿ, ಹೊನ್ನನಾಯಕನಹಳ್ಳಿ, ಅರಳಾಪುರ, ಮತ್ತು ಹೊಸೂರುದೊಡ್ಡಿ ಗ್ರಾಮ ವ್ಯಾಪ್ತಿಯಲ್ಲಿ 99.95 ಲಕ್ಷದ ಸಿ.ಸಿ. ರಸ್ತೆ ಕಾಮಗಾರಿಗೆ ಹಾಗೂ ಕದರ ಮಂಗಲದಿಂದ ಕುಂಬಾರಕಟ್ಟೆ ಮಾರ್ಗವಾಗಿ ಬೊಮ್ಮನಾಯಕನಹಳ್ಳಿಗೆ ಸೇರುವ 3.20 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಎಂ. ಬಿ ಹಳ್ಳಿ ಗ್ರಾಮದ ಮಹಿಳೆಯರಿಂದಲೇ ಪೂಜೆ ನೆರವೇರಿಸಿದರು.

ಕೆರೆಗಳಿಗೆ ನೀರು ತುಂಬಿಸಲು ಶೀಘ್ರ ಕ್ರಮ

ಕೊಂಡಕ್ಕೆಬಿದ್ದಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು “ಎಂ.ಬಿ. ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲ ಸೌಕಾರ್ಯಗಳ ಅಭಿವೃದ್ಧಿಗೆ ರೂ 4.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೇ 128 ಮನೆ ಮಂಜೂರು, 2 ಎಕರೆಯಲ್ಲಿ ನಿವೇಶನಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಗ್ರಾಮದ ಕೆರೆಗೆ ನೀರು ತುಂಬಿಸಲು ಪೈಪ್ ಲೈನ್ ಹಾಕಲು ಎರಡು ದಿನಗಳಲ್ಲಿ ಅಧಿಕಾರಿಗಳನ್ನು ಸ್ಥಳ ವೀಕ್ಷಣೆಗೆ ಕಳಿಸಲಾಗುವುದು” ಎಂದರು.

5 ಸೇತುವೆಗಳ ನಿರ್ಮಾಣಕ್ಕೆ ಚಾಲನೆ

ಹೊಟ್ಟೆಗಾನ ಹೊಸಹಳ್ಳಿ, ಕೂಡ್ಲುರು (ವಾಲೆ ತೋಪು), ಕಾಡಂಕನಹಳ್ಳಿಯ ನುಣ್ಣೂರು ರಸ್ತೆ ಹತ್ತಿರ ಹಾಗೂ ನೆಲಮಾಕನಹಳ್ಳಿ ಬಳಿ ಹಾಗೂ ದೊಡ್ಡ ಮಳುರಿನ ಬಳಿ ಕಣ್ವ ನದಿಗೆ ಅಡ್ಡಲಾಗಿ ನೀರಾವರಿ ಇಲಾಖೆಯ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರು.

20 ವರ್ಷಗಳಿಂದ ನಿಂತು ಹೋಗಿದ್ದ ಸಮುದಾಯ ಭವನಕ್ಕೆ ಚಾಲನೆ

ಸುಮಾರು 20 ವರ್ಷಗಳಿಂದ ಅರ್ಧಕ್ಕೆ ನಿಂತು ಹೋಗಿದ್ದ ಕೂಡ್ಲುರಿನಲ್ಲಿ (ವಾಲೆ ತೋಪು) ಅರಸು ಸಮುದಾಯ ಭವನಕ್ಕೆ ಡಿಸಿಎಂ ಮರು ಚಾಲನೆ ನೀಡಿದರು. ನಂತರ ಹುಣಸನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಪ್ರತಿ ಊರಿನಲ್ಲೂ ಡಿಸಿಎಂ ಆಗಮನದ ವೇಳೆ ಪಟಾಕಿ ಸಿಡಿಸಿ, ಜೆಸಿಬಿ ಮೇಲೆ ನಿಂತು ಪುಷ್ಪಾರ್ಚನೆ ಮಾಡಿ ಗ್ರಾಮಸ್ಥರು ಸಂಭ್ರಮಿಸಿದರು. ಮಹಿಳೆಯರು ದೃಷ್ಟಿ ಆರತಿ ಬೆಳಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಹರಸಿದರು.

ಚನ್ನಪಟ್ಟಣದ ಪ್ರತಿ ಪಂಚಾಯ್ತಿಯಲ್ಲಿ ₹2-5 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ: ಡಿಸಿಎಂ

“ಚನ್ನಪಟ್ಟಣದ ಪ್ರತಿ ಪಂಚಾಯ್ತಿಯಲ್ಲಿ ₹2 ಕೋಟಿಯಿಂದ ₹5-6 ಕೋಟಿವರೆಗೂ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣದ ವಿವಿಧ ಪಂಚಾಯ್ತಿ ಮಟ್ಟದಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದ ವೇಳೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಚನ್ನಪಟ್ಟಣದಲ್ಲಿ ₹300 ಕೋಟಿಗೂ ಹೆಚ್ಚಿನ ಅನುದಾನದ ಅಭಿವೃದ್ಧಿ ಯೋಜನೆಗಳನ್ನು ನಮ್ಮ ಸರ್ಕಾರ ಕೈಗೆತ್ತಿಕೊಂಡಿದೆ. ಈ ತಾಲೂಕಿನ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಿ, ಫಲಾನುಭವಿಗಳಿಗೆ ಹಂಚಲಾಗುತ್ತಿದೆ. ಪ್ರತಿ ಪಂಚಾಯ್ತಿಯಲ್ಲಿ 100, 150 ಮನೆಗಳನ್ನು ನೀಡಲಾಗುತ್ತಿದೆ. ಇನ್ನು ನೀರಾವರಿ ಕಾಲುವೆ ಅಭಿವೃದ್ಧಿ, ಕೆರೆ ನೀರು ತುಂಬಿಸುವ ಕೆಲಸ ನಡೆಯಲಿದೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಇಡೀ ದಿನ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಶುಕ್ರವಾರ ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಸೇರಿ ಪಂಚಾಯ್ತಿ ಮಟ್ಟದ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ನಾನೇ ಅಭ್ಯರ್ಥಿ ಎಂದು ಮತ ಹಾಕಿ:

ಮುಂದಿನ ಒಂದು ವಾರದಲ್ಲಿ ಉಪಚುನಾವಣೆ ದಿನಾಂಕ ಪ್ರಕಟವಾಗಲಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಕೇಳಿದಾಗ, “ನಾವು ಅಭ್ಯರ್ಥಿ ಬಗ್ಗೆ ಆಲೋಚಿಸುತ್ತಿಲ್ಲ. ಇಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಿ ಎಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ವ್ಯಕ್ತಿ ಹಾಗೂ ಸರ್ಕಾರ ನಾನೇ ಆಗಿದ್ದು, ಅಭ್ಯರ್ಥಿಗಿಂತ ನನ್ನ ಮುಖ ನೋಡಿ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ವಿರುದ್ಧ 50 ಕೋಟಿ ವಸೂಲಿ ಆರೋಪ ಹಾಗೂ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಗುರುವಾರ ನಡೆದ ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ನಿರತವಾಗಿದ್ದೆ. ಶುಕ್ರವಾರ ಚನ್ನಪಟ್ಟಣ ಪ್ರವಾಸ ಮಾಡುತ್ತಿದ್ದೇನೆ. ಹೀಗಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಖಾಸಗಿ ವಿಚಾರಕ್ಕೆ ನಾವು ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಹೇಳಿದರು.

ಇಡೀ ಮೈಸೂರು ತುಂಬಾ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅದರ ಸೌಂದರ್ಯವನ್ನು ರಾಜ್ಯದ ಜನತೆ ಕಣ್ಣುತುಂಬಿಕೊಳ್ಳಬೇಕು. ದಸರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ರಾಜ್ಯದ ಎಲ್ಲಾ ಭಾಗಗಳಿಂದ ಜನ ಆಗಮಿಸಿ ಈ ಭವ್ಯ ಆಚರಣೆಯ ಭಾಗವಾಗಬೇಕು ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಜಾತಿ ಗಣತಿ; ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಲಾಗುವುದು:

ಜಾತಿ ಗಣತಿ ವಿಚಾರವಾಗಿ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಪಕ್ಷದ ನೀತಿಯಂತೆ ನಾವು ಈ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೂ ನಾವು ನ್ಯಾಯ ಒದಗಿಸಿಕೊಡುತ್ತೇವೆ. ಈ ವರದಿಯಲ್ಲಿ ಏನಾದರೂ ನ್ಯೂನ್ಯತೆ ಇದ್ದರೆ ಸಿದ್ದರಾಮಯ್ಯ, ನಾನು ಹಾಗೂ ನಮ್ಮ ಪಕ್ಷದ ನಾಯಕರು ಕೂತು ಸರಿಪಡಿಸುತ್ತೇವೆ. ಈ ವಿಚಾರವಾಗಿ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button