*ಸಹಕಾರಿ ತತ್ವದಲ್ಲಿ ಜನರ ಜೀವನಾಡಿಯಾಗಿ ಬೆಳೆದ ಹೆಮ್ಮರ ಜಮಖಂಡಿ ಬ್ಯಾಂಕ್: ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಮತ*

ಪ್ರಗತಿವಾಹಿನಿ ಸುದ್ದಿ: “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದೇ ಸಹಕಾರಿ ತತ್ವದ ಮೂಲಮಂತ್ರ. ಜಮಖಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ತತ್ವದಲ್ಲಿ ಬೆಳೆದ ಹೆಮ್ಮರ. ನಾನು ಎನ್ನುವುದು ಬಿಟ್ಟು ನಾವು ಎಂದು ಮುಂದುವರೆದಾಗ ಮಾತ್ರ ಸಹಕಾರಿ ತತ್ವದಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯ. ಈ ರೀತಿಯಲ್ಲಿ ಕೆಲಸ ಮಾಡಿದ ಕಾರಣಕ್ಕೆ ಜಮಖಂಡಿ ಬ್ಯಾಂಕ್ ಜನರ ಜೀವನಾಡಿಯಾಗಿದೆ”ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಬಾಗಲಕೋಟೆಯ ಜಮಖಂಡಿಯಲ್ಲಿ ಬುಧವಾರ ನಡೆದ ದಿ ಜಮಖಂಡಿ ಅರ್ಬನ್ ಕೋ ಆಪ್ ಬ್ಯಾಂಕ್ ನ ನೂತನ ಪ್ರಧಾನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
“ಮಹಾತ್ಮ ಗಾಂಧಿ ಅವರು ಸಹ ಸಹಕಾರಿ ತತ್ವದ ಮೇಲೆ ನಂಬಿಕೆಯನ್ನಿಟ್ಟಿದ್ದರು. ಸಹಕಾರಿ ತತ್ವದಿಂದಲೇ ಸಮಾಜದ ಏಳಿಗೆ ಎಂದಿದ್ದರು. ಒಂದು ಹಳ್ಳಿ ಬದುಕಬೇಕು ಎಂದರೆ ಶಾಲೆ, ಪಂಚಾಯಿತಿ, ಸಹಕಾರಿ ಸಂಸ್ಥೆ ಇರಬೇಕು ಎಂದು ಪ್ರತಿಪಾದಿಸಿದ್ದರು” ಎಂದರು.
“ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚೆ ಮಾಡುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎನ್ನುವ ಮಾತನ್ನು ನಾನು ಸದಾ ಹೇಳುತ್ತಿರುತ್ತೇನೆ. ಸಹಕಾರಿ ತತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲೇಬೇಕು. ಆದ ಕಾರಣಕ್ಕೆ ಈ ರೀತಿಯ ಅನೇಕ ಬ್ಯಾಂಕ್ ಗಳಿಂದ ರಾಜ್ಯದಲ್ಲಿ ಸಹಕಾರಿ ತತ್ವ ಇನ್ನೂ ಜೀವಂತವಾಗಿದೆ. ಸಹಕಾರಿ ತತ್ವ ಉಳಿಯಬೇಕು, ಬೆಳೆಯಬೇಕು” ಎಂದರು.
ಆದಷ್ಟು ಬೇಗ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಕ್ರಮ
“ಆಲಮಟ್ಟಿ ಜಲಾಶಯದ ಎತ್ತರವನ್ನು ಆದಷ್ಟು ಬೇಗ ಎತ್ತರಿಸಿ ಈ ಭಾಗದ ರೈತರ ಪಾಲಿಗೆ ನಾವು ಬೆಳಕಾಗಲಿದ್ದೇವೆ. ಈ ಕೆಲಸಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ. ಈ ಭಾಗದಲ್ಲಿ ಅನೇಕ ರೈತರು ಹೆಚ್ಚಿನ ಪರಿಹಾರ ನೀಡಬೇಕು ಎಂದು ನ್ಯಾಯಲಯದಿಂದ ಆದೇಶ ತಂದಿದ್ದಾರೆ. ಬೆಂಗಳೂರಿಗಿಂತ ಹೆಚ್ಚು ಪರಿಹಾರ ಕೇಳುತ್ತಿದ್ದಾರೆ. ಇಷ್ಟೊಂದು ಹಣ ನೀಡಲು ಕಷ್ಟ. ಇದರ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಮಾಡಲು ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತರುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನೀರಾವರಿ ಕ್ಷೇತ್ರಕ್ಕೆ ಐದು ವರ್ಷದಲ್ಲಿ ರೂ.2 ಲಕ್ಷ ಕೋಟಿ ನೀಡುತ್ತೇವೆ ಎಂದು ಹೇಳಿದ್ದೆವು. ಗ್ಯಾರಂಟಿ ಯೋಜನೆಗಳು ಇರುವ ಕಾರಣಕ್ಕೆ ಪ್ರತಿವರ್ಷ ರೂ.40 ಸಾವಿರ ಕೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಈ ವರ್ಷ ರೂ. 22 ಸಾವಿರ ಕೋಟಿ ನಿಗಧಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಮಾತು ಕೊಟ್ಟಷ್ಟು ಅನುದಾನವನ್ನು ನೀಡುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಲಾಗುವುದು” ಎಂದು ಹೇಳಿದರು.
ನೂರಾರು ನಾಯಕರು ಬೆಳೆದ ಕ್ಷೇತ್ರ
“ರಾಹುಲ್ ಕಲೂತಿ ಅವರು ಈ ಬ್ಯಾಂಕಿನ ಅಧ್ಯಕ್ಷರಾದಾಗ 10 ಶಾಖೆಗಳಿದ್ದವು. ಈಗ 16 ಶಾಖೆಗೆ ಹೆಚ್ಚಳ ಮಾಡಿದ್ದಾರೆ. ಯುವಕನ ಮೇಲೆ ನಂಬಿಕೆಯಿಟ್ಟು ಅನೇಕ ಹಿರಿಯರು ಅವರ ಬೆನ್ನಿಗೆ ನಿಂತಿದ್ದಾರೆ. ಈ ಬ್ಯಾಂಕಿನಿಂದ ಬಿ.ಡಿ.ಜತ್ತಿ ಅವರು, ಸಿದ್ದು ನ್ಯಾಮಗೌಡರಂತ ನಾಯಕರು ಹೊರಹೊಮ್ಮಿದ್ದಾರೆ. ಹೀಗೆ ನೂರಾರು ನಾಯಕರು ಜಮಖಂಡಿ ಬ್ಯಾಂಕಿನಿಂದ ಸಮಾಜಕ್ಕೆ ಕೊಡುಗೆಯಾಗಿ ಬಂದಿದ್ದಾರೆ” ಎಂದು ಹೇಳಿದರು.
“ಕೆಎಂಎಫ್ ಸೇರಿದಂತೆ ಅನೇಕ ಸಹಕಾರಿ ತತ್ವದ ಅಡಿಯಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗಳು ಕನ್ನಡಿಗರ ಸೇವೆ ಮಾಡುತ್ತಿವೆ. ಸಹಕಾರಿ ಸಂಸ್ಥೆ ಬೆಳೆದರೆ ಜನರ ಬದುಕಿನಲ್ಲಿ ಬದಲಾವಣೆ ಸಾಧ್ಯ. ನಾನು, ಎಚ್.ಆರ್.ಪಾಟೀಲ್ ಅವರು, ಲಕ್ಷ್ಮಣ್ ಸವದಿ ಅವರು, ಶಿವಾನಂದ ಪಾಟೀಲ್ ಅರು, ನಿರಾಣಿ ಅವರು ಸೇರಿದಂತೆ ಅನೇಕ ನಾಯಕರು ಬೆಳೆದಿದ್ದು ಸಹಕಾರಿ ಕ್ಷೇತ್ರದಿಂದ” ಎಂದು ಹೇಳಿದರು.
“ಜಮಖಂಡಿ ಮೂಲೆಯಲ್ಲಿ ಇರುವ ಕ್ಷೇತ್ರವಲ್ಲ. ರಾಜ್ಯಕ್ಕೆ ಶ್ರೀಮಂತವಾದ ಕ್ಷೇತ್ರ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಈ ಭಾಗದಲ್ಲಿ 50 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಈ ಕಾರಣಕ್ಕೆ ಲಕ್ಷಾಂತರ ರೈತರ ಬದುಕು ಬದಲಾಗಿದೆ” ಎಂದು ತಿಳಿಸಿದರು.
“1983 ರಲ್ಲಿ ಟಿಎಪಿಸಿಎಂಎಸ್ ನಲ್ಲಿ ನಿರ್ದೇಶಕನಾಗಿದ್ದೆ. ಅಲ್ಲಿಂದ ಇಲ್ಲಿಯ ತನಕ ಬೆಳೆದಿದ್ದೇನೆ. ಸಹಕಾರ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ಆಗ ಅನೇಕ ಸಕ್ಕರೆ ಕಾರ್ಖಾನೆಗಳಿಗೆ ಸಹಕಾರಿ ಸಂಘಗಳಿಂದ ಸಾಲ ಕೊಡುವ ಯೋಜನೆ ಜಾರಿಗೆ ತರಲಾಯಿತು. ಇದರಿಂದ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು. ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ನಾವು ಸಿದ್ದು ನ್ಯಾಮಗೌಡ ಅವರ ಸಕ್ಕರೆ ಕಾರ್ಖಾನೆಗೆ ಭೂಮಿಪೂಜೆ ಮಾಡುವ ಸದಾವಕಾಶ ನನಗೆ ಸಿಕ್ಕಿತ್ತು” ಎಂದು ಹೇಳಿದರು.
ಗ್ಯಾರಂಟಿಗಳಿಂದ ಜನರ ಬದುಕಿನಲ್ಲಿ ಬದಲಾವಣೆ
“ವಿಜಯಪುರದ ಇಂಡಿ ತಾಲ್ಲೂಕಿನ ಮಹಿಳೆಯರು ಬೆಂಗಳೂರಿಗೆ ಉಚಿತ ಬಸ್ ನಲ್ಲಿ ಬಂದು ಹೋಳಿಗೆ ಮಾರಾಟ ಮಾಡಿ ತಿಂಗಳಿಗೆ ರೂ. 20 ಸಾವಿರ ದುಡಿಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಅನೇಕ ಮಹಿಳೆಯರ ಬದುಕಿನಲ್ಲಿ ಬದಲಾವಣೆಯಾಗಿದೆ. ಯುವನಿಧಿ ಯುವಕರ ಬದುಕಿಗೆ ನೆರವಾಗಿದೆ” ಎಂದರು.
“ರಾಜ್ಯದ ಇತಿಹಾಸದಲ್ಲಿಯೇ ರೂ.4 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿ ಸಿದ್ದರಾಮಯ್ಯ ಅವರು ದಾಖಲೆ ನಿರ್ಮಿಸಿ ಇತಿಹಾಸದ ಪುಟ ಸೇರಿದ್ದಾರೆ. ನಾವು ಜಾತಿ ಮೇಲೆ ರಾಜಕಾರಣ ಮಾಡುತ್ತಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಮತ್ತೆ 2028 ಕ್ಕೆ ರಾಜ್ಯದ ಜನ ಮತ್ತೊಮ್ಮೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.
“ಉತ್ತರ ಕರ್ನಾಟಕ ಭಾಗದಲ್ಲಿಯೂ ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ಇದು ಶುಭ ಸೂಚಕ ಬೆಳವಣಿಗೆ. ನಮ್ಮ ಕಡೆ ಸಿಲ್ಕ್ ಮತ್ತು ಮಿಲ್ಕ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಎಲ್ಲಾ ಭಾಗಗಳಲ್ಲೂ ರೈತರು ಪ್ರಗತಿಪರವಾಗಿ ಬೆಳೆಯಬೇಕು. ಎಂಜಿನಿಯರ್ ಗಳಿಗಿಂತ ಹೆಚ್ಚು ದುಡಿಯುವ ಶಕ್ತಿ ರೈತರಿಗಿದೆ. ಇದನ್ನು ಇಲ್ಲಿಯ ಸಕ್ಕರೆ ಕಾರ್ಖಾನೆಗಳು ನಿಜ ಮಾಡಿವೆ” ಎಂದು ಹೇಳಿದರು.
“ರಾಹುಲ್ ಕಲೂತಿ ಅವರು ಕಳೆದ ಒಂದು ವರ್ಷದಿಂದ ಪಟ್ಟು ಬಿಡದೆ ನನ್ನಿಂದಲೇ ಜಮಖಂಡಿ ಬ್ಯಾಂಕಿನ ಕಟ್ಟಡ ಉದ್ಘಾಟನೆ ಮಾಡಿಸಬೇಕು ಎಂದು ಛಲ ಬಿಡದೆ ನಿಂತಿದ್ದರು. ನನ್ನನ್ನು ಇಲ್ಲಿಗೆ ಕರೆತಂದು ಉದ್ಘಾಟನೆ ಮಾಡಿಸಿದ್ದು ಅತ್ಯಂತ ಸಂತಸದ ವಿಚಾರ. ಸರಳತೆಗೆ ಮತ್ತೊಂದು ಹೆಸರೇ ಇವರು. ಯಾವಾಗ ನನ್ನನ್ನು ಭೇಟಿ ಮಾಡಿದರೂ ಅತ್ಯಂತ ತಾಳ್ಮೆಯಿಂದ ಇರುತ್ತಾರೆ.
ಅಪಘಾತವಾದಾಗ ನೆರವಿಗೆ ಬಂದಿದ್ದರು
“ನಾನು, ಸಿದ್ದು ನ್ಯಾಮಗೌಡ, ರಾಹುಲ್ ಕಲೂತಿ ನಾವುಗಳು ಆತ್ಮೀಯ ಸ್ನೇಹಿತರು. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ ಜಮಖಂಡಿಗೆ ಬರುವ ವೇಳೆ ಅಪಘಾತವಾಗಿತ್ತು. ಆಗ ಸಿದ್ದು ನ್ಯಾಮಗೌಡರು ಹಾಗೂ ರಾಹುಲ್ ಅವರು ನೆರವಿಗೆ ಬಂದಿದ್ದರು. ಈ ಸ್ನೇಹ ಸಂಬಂಧದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಈ ಭಾಗದಲ್ಲಿ ಸದ್ದಿಲ್ಲದೇ ಸರಳವಾಗಿ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳು ಇವರು” ಎಂದು ಬಣ್ಣಿಸಿದರು.
ಖಾಲಿ ಇರುವ ಪರಿಷತ್ ಸ್ಥಾನ ತುಂಬುವ ಬಗ್ಗೆ ಚರ್ಚೆ
ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಜಮಖಂಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವೇಳೆ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, “ಖಾಲಿ ಇರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಬಗ್ಗೆ ಹೈಕಮಾಂಡ್ ಬಳಿ ಚರ್ಚೆ ನಡೆಸಲಾಗುವುದು. ಎಷ್ಟು ದಿನ ಸ್ಥಾನಗಳನ್ನು ಖಾಲಿ ಬಿಡಲು ಸಾಧ್ಯ” ಎಂದರು.
“ದೆಹಲಿ ಭೇಟಿ ವೇಳೆ ಅನೇಕ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು. ರಾಜನಾಥ್ ಸಿಂಗ್ ಅವರ ಭೇಟಿಗೆ ಸಮಯ ಕೇಳಿದ್ದೇನೆ” ಎಂದು ಹೇಳಿದರು.
ಸಂಪುಟ ಬದಲಾವಣೆ ಬಗ್ಗೆ ಕೇಳಿದಾಗ, “ಇದೆಲ್ಲವೂ ಮಾಧ್ಯಮಗಳಲ್ಲಿ ಬಂದಿರುವ ಊಹಾಪೋಹಗಳು. ಇದು ಸುಳ್ಳು ಮಾಹಿತಿ. ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಚರ್ಚೆ ಮಾಡುತ್ತಾರೆ. ಮಾಧ್ಯಮಗಳಿಗೆ ಬಂದಿರುವ ಮಾಹಿತಿ ಸತ್ಯಕ್ಕೆ ದೂರವಾದುದ್ದು” ಎಂದರು.
ಯತ್ನಾಳ್ ಅವರು ಕಾಂಗ್ರೆಸ್ಸಿಗೆ ಬರುವ ಬಗ್ಗೆ ಕೇಳಿದಾಗ, “ಇದೆಲ್ಲವೂ ಸುಳ್ಳು. ನಮಗೆ ಆ ಪಕ್ಷದವರ ಸುದ್ದಿ ಏಕೆ ಬೇಕು. ಅವರುಂಟು ಅವರ ಪಕ್ಷವುಂಟು. ಏನು ಬೇಕಾದರೂ ಆಗಲಿ ಆದರೆ ಒಳ್ಳೆಯದಾಗಲಿ” ಎಂದು ಕುಟುಕಿದರು.
ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅವರು ಹುಬ್ಬಳ್ಳಿ ಭಾಗದಲ್ಲಿ ಪೊಲೀಸ್ ಠಾಣೆಗಳ ಸಂಖ್ಯೆ ಹಾಗೂ ಪೊಲೀಸರ ಸಂಖ್ಯೆ ಜಾಸ್ತಿಯಾಗಬೇಕು ಎಂದು ನೀಡಿರುವ ಮನವಿ ಬಗ್ಗೆ ಹಾಗೂ ಪೊಲೀಸರ ಕೊರತೆ ಬಗ್ಗೆ ಕೇಳಿದಾಗ, “ಎರಡನೇ ಹಾಗೂ ಮೂರನೇ ಸಾಲಿನ ಜಿಲ್ಲೆಗಳಿಗೆ ಬರುವ ಉದ್ದಿಮೆಗಳಿಗೆ ಹೆಚ್ಚನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಗೃಹಸಚಿವರ ಬಳಿ ಚರ್ಚೆ ಮಾಡುತ್ತೇನೆ” ಎಂದರು.
ಹಾಲಿನ ಬೆಲೆ ಏರಿಕೆ ವಿಚಾರವಾಗಿ ಕೇಳಿದಾಗ, “ರೈತರು ಬದುಕಬೇಕೆ ಬೇಡವೇ? ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇ ಬೆಲೆಏರಿಕೆಯಿಂದ ತತ್ತರಿಸುತ್ತಿರುವ ಜನಕ್ಕೆ ಉಪಯೋಗವಾಗಲಿ ಎಂದು” ಹೇಳಿದರು.
ಸಂಸತ್ತಿನಲ್ಲಿ ವಕ್ಫ್ ಮಸೂದೆ ಅಂಗೀಕಾರದ ಬಗ್ಗೆ ಕೇಳಿದಾಗ, “ಈ ವಿಚಾರದ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರು ಪ್ರತಿಕ್ರಿಯೆ ನೀಡಿದ್ದಾರೆ” ಎಂದರು.