Latest

ಅದೇನು ಕಡ್ಲೆಪುರಿ ವ್ಯಾಪಾರಾನಾ? – ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ

ಯಾರೋ ಮೆಂಟಲ್‍ಗಳು ಏನೇನೋ ಮಾತಾಡ್ತಾರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾರೋ ಮೆಂಟಲ್‍ಗಳು ಏನೇನೋ ಮಾತಾಡ್ತಾರೆ. ಕಾಂಗ್ರೆಸ್‍ನಿಂದ 20 ಜನ, 30 ಜನ, 40 ಜನರನ್ನು ಬಿಜೆಪಿಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಿದ್ದಾರೆ. ಅದೇನು ಕಡ್ಲೆಪುರಿ ವ್ಯಾಪಾರಾನಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನ 20 ಶಾಸಕರು ತಮ್ಮ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಬಿಜೆಪಿಗೆ ಸೇರ್ಪಡೆಗೊಳಿಸುವುದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, 20 ಜನ, 30 ಜನ, 40 ಜನರನ್ನು ಬಿಜೆಪಿಗೆ ಕರೆದುಕೊಂಡು ಹೋಗುತ್ತೇನೆ ಎನ್ನಲು ಕಡಲೆಪುರಿ ವ್ಯಾಪಾರ ಅಲ್ಲ. ಇಂತಹ ಮಾತುಗಳನ್ನು ಆಡಿ ಶಾಸಕರಿಗೆ ಅಗೌರವ ತೋರುವುದು ಸರಿಯಲ್ಲ ಎಂದರು.

Home add -Advt

ಯಾವ್ಯಾವ ಸಚಿವರು ಏನೇನು ಮಾತಾಡಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇನೆ. ಯಾರ್ಯಾರು ಎಲ್ಲಿ ಏನು ಸಭೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತು. ನಿನ್ನೆ ರಾತ್ರಿ ಯಾರು ಯಾವ ಹೋಟೆಲ್‍ನಲ್ಲಿ ಸೇರಿದ್ದರು ಎಂಬುದು ಗೊತ್ತು. ಯಾರು ಯಾರನ್ನ ಕಾಯ್ತಾ ಕೂತಿದ್ದರು ಅನ್ನೋದು ಗೊತ್ತಿದೆ ಎಂದು ಗುಡುಗಿದರು.

ಇದೇ ವೇಳೆ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸ್ಪರ್ಧೆ ಬಗ್ಗೆ ಇದುವರೆಗೆ ನಮ್ಮ ಜೊತೆ ಯಾರೂ ಚರ್ಚೆ ಮಾಡಿಲ್ಲ. ನಮ್ಮ ಹೈಕಮಾಂಡ್ ಸೋನಿಯಾ ಗಾಂಧಿ ಅವರು ಹೆಚ್.ಡಿ.ದೇವೇಗೌಡ ಅವರಿಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಹೈ ಕಮಾಂಡ್, ಪಾರ್ಟಿ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ಧ. ಇನ್ನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಜೂನ್ 8ರಂದು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವಾಗ ಪಕ್ಷದ ಯಾವ ಕಾರ್ಯಕರ್ತರು ಬರಬಾರದು. ಶಾಸಕರು ಕೆಲವು ಮುಖಂಡರುಗಳಷ್ಟೇ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Related Articles

Back to top button