‘ಸಾಯುವುದಿದ್ದರೆ ಸಾಯಿರಿ, ಬಸ್ ನಿಲ್ಲಿಸಲ್ಲ’: ನೊಯ್ಡಾ ಬಸ್ ದುರಂತದ ವೇಳೆ ಚಾಲಕ, ಕಂಡಕ್ಟರ್ ವರ್ತನೆಗೆ ಪ್ರಯಾಣಿಕರು ಶಾಕ್!

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಸ್ಲೀಪರ್ ಬಸ್ ಅಗ್ನಿ ಅವಘಡದಲ್ಲಿ 9 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ದೆಹಲಿಯ ಕಾಶ್ಮೀರಿ ಗೇಟ್‌ನಿಂದ ಉತ್ತರ ಪ್ರದೇಶದ ಮಹೋಬಾಕ್ಕೆ ತೆರಳುತ್ತಿದ್ದ ಬಿಹಾರ ಮೂಲದ ‘ರಾಜ್ ಕಲ್ಪನಾ ಟ್ರಾವೆಲ್ಸ್’ ಬಸ್‌ನಲ್ಲಿ ರಾತ್ರಿ ಸುಮಾರು 11 ಗಂಟೆಗೆ ಈ ದುರಂತ ಸಂಭವಿಸಿದೆ. ಪ್ರಯಾಣಿಕ ಸುನೀಲ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಜೇವರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪ ಮಾಡಲಾಗಿದೆ.
ಹಮೀರ್‌ಪುರ ಜಿಲ್ಲೆಯ ನಿವಾಸಿ ಸುನೀಲ್ ಕುಮಾರ್ ನೀಡಿರುವ ದೂರಿನ ಪ್ರಕಾರ, ಬಸ್ ರಾತ್ರಿ 9 ಗಂಟೆ ಸುಮಾರಿಗೆ ದೆಹಲಿಯಿಂದ ಹೊರಟಿತ್ತು. ಯಮುನಾ ಎಕ್ಸ್‌ಪ್ರೆಸ್‌ವೇಯ 33ನೇ ಕಿಲೋಮೀಟರ್ ತಲುಪಿದಾಗ ಚಾಲಕನ ಕ್ಯಾಬಿನ್ ಕಡೆಯಿಂದ ಸುಟ್ಟ ವಾಸನೆ ಬರಲು ಆರಂಭಿಸಿತ್ತು. ಚಾಲಕ ಹಾಗೂ ಕಂಡಕ್ಟರ್ ಕ್ಯಾಬಿನ್‌ನಲ್ಲಿ ಬೀಡಿ ಮತ್ತು ಸಿಗರೇಟ್ ಸೇದುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಸ್‌ನಲ್ಲಿ ಸುಟ್ಟ ವಾಸನೆ ಬರುತ್ತಿರುವುದನ್ನು ಪ್ರಯಾಣಿಕರು ಚಾಲಕ ಮತ್ತು ಕಂಡಕ್ಟರ್ ಗಮನಕ್ಕೆ ತಂದಿದ್ದರು. ಆದರೆ ಅವರು ಅದನ್ನು ನಿರ್ಲಕ್ಷಿಸಿ, ಬಸ್‌ನಲ್ಲಿ ಪ್ರತಿದಿನವೂ ಇದೇ ರೀತಿಯ ವಾಸನೆ ಬರುತ್ತದೆ ಎಂದು ಹೇಳಿ ಬಸ್ ನಿಲ್ಲಿಸದೆ ಮುಂದುವರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೆಲವೇ ಕ್ಷಣಗಳಲ್ಲಿ ಚಾಲಕನ ಸೀಟಿನ ಬಳಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಗಾಬರಿಯಿಂದ ಕಿರುಚಾಡಿದ್ದಾರೆ. ಈ ವೇಳೆ ಚಾಲಕ ಮತ್ತು ಕಂಡಕ್ಟರ್ ಬಸ್ ನಿಲ್ಲಿಸದೆ, “ನೀವು ಸಾಯುವುದಿದ್ದರೆ ಸಾಯಿರಿ, ನಾವು ಬಸ್ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬೆಂಕಿ ವೇಗವಾಗಿ ಇಡೀ ಬಸ್‌ಗೆ ವ್ಯಾಪಿಸಿದ ಬಳಿಕ ವಾಹನ ನಿಲ್ಲಿಸಲಾಗಿದೆ. ಅಷ್ಟರೊಳಗೆ ಬಸ್‌ನೊಳಗೆ ದಟ್ಟ ಹೊಗೆ ಆವರಿಸಿಕೊಂಡಿತ್ತು. ದೂರುದಾರ ಸುನೀಲ್ ಕುಮಾರ್ ಸೇರಿದಂತೆ ಹಲವು ಪ್ರಯಾಣಿಕರು ಕಿಟಕಿಗಳ ಮೂಲಕ ಹೊರಗೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಆದರೆ ಮಹಿಳೆ ಸೇರಿದಂತೆ 9 ಮಂದಿ ಪ್ರಯಾಣಿಕರು ಬಸ್‌ನಿಂದ ಹೊರಬರಲಾಗದೆ ಒಳಗಡೆಯೇ ಸಿಲುಕಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗ್ರೇಟರ್ ನೋಯ್ಡಾ ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಜೇವರ್‌ನ ದಯಾನಂದಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬಸ್‌ನ ಏರ್ ಕಂಡಿಷನಿಂಗ್ (ಎಸಿ) ವ್ಯವಸ್ಥೆಯಲ್ಲಿ ಉಂಟಾದ ಸ್ಪಾರ್ಕ್ ಅಥವಾ ಸ್ಫೋಟದಿಂದ ಎಂಜಿನ್‌ನ ಲೂಬ್ರಿಕೇಟಿಂಗ್ ಆಯಿಲ್‌ಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಕೆಲವೇ ನಿಮಿಷಗಳಲ್ಲಿ ಇಡೀ ಬಸ್‌ಗೆ ವ್ಯಾಪಿಸಿದೆ ಎನ್ನಲಾಗಿದೆ.
ಗಾಯಗೊಂಡ ಹಲವು ಪ್ರಯಾಣಿಕರನ್ನು ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 9 ಮಂದಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಘಟನೆ ಬಳಿಕ ಬಸ್‌ನ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಇಬ್ಬರ ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಪ್ರಯಾಣಿಕರ ಸಾವಿಗೆ ಕಾರಣವಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಪರಾರಿಯಾಗಿರುವ ಚಾಲಕ ಮತ್ತು ಕಂಡಕ್ಟರ್‌ಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ದುರಂತಕ್ಕೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಜೇವರ್‌ನ ಕೈಲಾಶ್ ಆಸ್ಪತ್ರೆಯಲ್ಲಿ ಅಗತ್ಯ ಹಾಗೂ ಸೂಕ್ತ ಚಿಕಿತ್ಸೆಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.




