Karnataka NewsLatestPolitics

*ನನಗೆ ಏನು ಬೇಕೋ ಅದನ್ನು ಪ್ರಾರ್ಥನೆ ಮಾಡಿದ್ದೇನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು. ಅವರು ನಮಗೆ ಬುದ್ಧಿವಾದ ಹೇಳಿದ್ದಾರೆ, ಸಂದೇಶ ನೀಡಿದ್ದಾರೆ. ಅವರ ಮಾತಿಗೆ ನಾವೆಲ್ಲರೂ ಬದ್ಧರಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ದೇವಿಯ ದರ್ಶನ ಪಡೆದ ನಂತರ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಸಿಎಂ ರೇಸ್ ನಿಂದ ನೀವು ಹೊರಬಿದ್ದಿದ್ದೀರಾ ಎಂದು ಪ್ರಶ್ನಿಸಿದಾಗ, “ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದೇನೆ. ಇಲ್ಲಿ ರಾಜಕೀಯ ಮಾತನಾಡುವುದಕ್ಕೆ ಬಂದಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಬಂದಿದ್ದೇನೆ” ಎಂದು ತಿಳಿಸಿದರು.

Home add -Advt

“ಯಾವುದೇ ಕೆಲಸ ಪ್ರಾರಂಭ ಮಾಡಬೇಕಾದರೂ ತಾಯಿಯ ಆಶೀರ್ವಾದ ಕೇಳುತ್ತೇನೆ. ಆದ ಕಾರಣ ಕುಟುಂಬ ಸಮೇತವಾಗಿ ಬಂದು ಈ ರಾಜ್ಯಕ್ಕೆ, ನಿಮಗೆ ಹಾಗೂ ನಮಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ” ಎಂದರು.

ನಿಮ್ಮ ಪ್ರಾರ್ಥನೆಗೆ ಭಗವಂತ ಫಲ ನೀಡುವ ದಿನಗಳು ಹತ್ತಿರ ಬಂದಿವೆಯೇ ಎಂದು ಕೇಳಿದಾಗ, “ನನಗೆ ಏನು ಬೇಕೋ ಅದನ್ನು ಪ್ರಾರ್ಥನೆ ಮಾಡಿದ್ದೇನೆ” ಎಂದು ಮಾರ್ಮಿಕವಾಗಿ ನುಡಿದರು.

“ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಈ ವರ್ಷ ನಾಡದೇವಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮವಾಗಿ ಮಳೆ ಬೀಳುತ್ತಿದೆ. ಈ ವರ್ಷ ಉತ್ತಮ ಮಳೆ, ನೆಮ್ಮದಿ, ಶಾಂತಿ ಲಭಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಪ್ರಯತ್ನ ವಿಫಲವಾಗಬಹುದು ಪ್ರಾರ್ಥನೆ ವಿಫಲವಾಗುವುದಿಲ್ಲ ಎನ್ನುವುದು ನನ್ನ ನಂಬಿಕೆ” ಎಂದು ಹೇಳಿದರು.

Related Articles

Back to top button