ಪ್ರಗತಿವಾಹಿನಿ ಸುದ್ದಿ: ರೈತರ ಹಿತ ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡಲಾಗಿದೆ. ಇದನ್ನು ವಿರೋಧಿಸಿರುವ ಬಿಜೆಪಿಯ ರೈತ ವಿರೋಧಿ ಮನಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ವಿಧಾನಸೌಧದ ಆವರಣದಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಹಾಲಿನ ದರ ಏರಿಕೆ ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ ಬಿಜೆಪಿ ರೈತರ ವಿರೋಧಿಗಳು ಎಂದು ಮತ್ತೊಮ್ಮೆ ಸಾಬೀತಾಗಿದೆ. ರೈತರ ಹಿತಕ್ಕಾಗಿ ಕೇವಲ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದೂ ಹಾಲಿನ ಪ್ರಮಾಣ ಹೆಚ್ಚಳಕ್ಕೆ ಅನುಗುಣವಾಗಿ. ರಾಜಕೀಯವಾಗಿ ಯಾರು ಏನು ಬೇಕಾದರೂ ಹೇಳಿಕೆ ನೀಡಬಹುದು. ಆದರೆ ಹಸುಗಳ ಮೇವಿನ ಬೆಲೆ ಸೇರಿದಂತೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ರೈತರ ಹಿತ ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಬೆಲೆಗೆ ಹಾಲು ನೀಡಲಾಗುತ್ತಿದೆ ಎಂದರು.
ಬೆಲೆ ಏರಿಕೆ ಹಣ ರೈತರಿಗೆ ಹೋಗುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷರು ಹೇಳಿದ್ದಾರೆ ಎಂದು ಕೇಳಿದಾಗ, “ಕೆಎಂಎಫ್ ಎಂದರೆ ರೈತರು, ಅದು ರೈತರ ಒಕ್ಕೂಟ. ಯಾರು ಏನಾದರೂ ವಿವಾದ ಮಾಡಲಿ, ಪರವಾಗಿಲ್ಲ. ನನ್ನ ಪ್ರಕಾರ ಹಾಲಿನ ದರ ಇನ್ನೂ ಹೆಚ್ಚಳ ಮಾಡಬೇಕಿತ್ತು. ರೈತರು ತಮ್ಮ ಹಸುಗಳನ್ನು ಮಾರಿಕೊಳ್ಳುವ ದುಸ್ಥಿತಿಯಲ್ಲಿ ಇದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ ಎಂದು ತಿಳಿದು, ಆಮೇಲೆ ಮಾತಾಡಲಿ. ರೈತರನ್ನು ಬದುಕಿಸುವ ಕೆಲಸ ಮಾಡಲಿ” ಎಂದು ತಿರುಗೇಟು ನೀಡಿದರು.
ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು:
ವಿರೋಧ ಪಕ್ಷದ ನಾಯಕನಾಗಬೇಕು ಎಂಬುದು ರಾಹುಲ್ ಗಾಂಧಿ ಅವರ ಬಯಕೆಯಲ್ಲ. ಇದು ಜನರ ಬಯಕೆ. ನಮ್ಮ ಮನವಿಯನ್ನು ಒಪ್ಪಿ ವಿರೋಧ ಪಕ್ಷದ ನಾಯಕ ಜವಾಬ್ದಾರಿ ವಹಿಸಿಕೊಂಡ ರಾಹುಲ್ ಗಾಂಧಿ ಅವರಿಗೆ ದೇಶದ ಜನರ ಪರವಾಗಿ, ಇಂಡಿಯಾ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದ ಹೇಳುತ್ತೇನೆ.
ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗೆ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಈ ತೀರ್ಮಾನ ನಾವು ಸ್ವಾಗತಿಸುತ್ತೇವೆ.
ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವ ತೀರ್ಮಾನ ಕೈಗೊಂಡ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ ಅವರಿಗೆ ಒತ್ತಡ ಹಾಕಿದ ಇಂಡಿಯಾ ಮೈತ್ರಿಕೂಟ ನಾಯಕರಿಗೆ ಅಭಿನಂದನೆಗಳು. ಈ ದೇಶದ ರಕ್ಷಣೆ ಹಾಗೂ ಜನರ ಹಿತ ಕಾಯಲು ಇಂಡಿಯಾ ಮೈತ್ರಿಕೂಟ ಹೋರಾಟ ಮಾಡಲಿದೆ” ಎಂದು ತಿಳಿಸಿದರು.
ಹೆಚ್ಚುವರಿ ಡಿಸಿಎಂ ಬೇಡಿಕೆ ಚರ್ಚೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ. ಈ ಬಗ್ಗೆ ಉತ್ತರ ನೀಡಲು ಅವರೇ ಸೂಕ್ತ ವ್ಯಕ್ತಿ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ