ಪ್ರಗತಿವಾಹಿನಿ ಸುದ್ದಿ: ಕುಮಾರಸ್ವಾಮಿ ಅವರ ರಾಜಕಾರಣ ಅವರಿಗೇ ಗೊತ್ತು. ನಮಗೆ ಗೊತ್ತಿಲ್ಲ. ಅವರ ರಾಜಕೀಯವೇ ಬೇರೆ, ಅವರ ಪಕ್ಷ ಹಾಗೂ ಕಾರ್ಯಕರ್ತರ ರಾಜಕಾರಣವೇ ಬೇರೆ. ಎನ್ ಡಿಎ ಮೈತ್ರಿ ರಾಜಕಾರಣವೇ ಬೇರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯಿಸಿದರು.
ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ನಾನು ಯೋಗೇಶ್ವರ್ ಅವರನ್ನು ಭೇಟಿ ಮಾಡಿಲ್ಲ, ಮಾತೂ ಆಡಿಲ್ಲ. ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗೆ ನೀಡಬೇಕಾದ ಗೌರವ ಕೊಟ್ಟಿದ್ದೇನೆ. ಅದರ ಹೊರತಾಗಿ ನಮ್ಮ ಮಧ್ಯೆ ಯಾವುದೇ ಭೇಟಿ, ಚರ್ಚೆ ನಡೆದಿಲ್ಲ ಎಂದು ಅಧಿಕೃತವಾಗಿ ಹೇಳುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೆ ಮಾಹಿತಿ ಇದ್ದರೆ ಮಾತನಾಡಿಕೊಳ್ಳಲಿ. ನನಗೂ ಬೇಕಾದಷ್ಟು ಮಾಹಿತಿಗಳಿವೆ. ಬೇರೆ ಪಕ್ಷದವರನ್ನು ಸಂಪರ್ಕಿಸುವ ಅವಶ್ಯಕತೆ ಸಧ್ಯಕ್ಕಿಲ್ಲ ಎಂದು ನಾನು ನಮ್ಮ ಪಕ್ಷದವರಿಗೂ ಹೇಳಿದ್ದೇನೆ. ಯೋಗೇಶ್ವರ್ ಅವರು ಹಾಲಿ ವಿಧಾನಪರಿಷತ್ ಸದಸ್ಯರು. ಚನ್ನಪಟ್ಟಣದಲ್ಲಿ ಶಾಸಕ ಸ್ಥಾನ ಖಾಲಿಯಾದಾಗಿನಿಂದ ನಾವು ಕೆಲಸ ಮಾಡಿಕೊಂಡು ಕಾರ್ಯಕರ್ತರನ್ನು ಸಜ್ಜುಮಾಡಿಕೊಂಡು ಬಂದಿದ್ದೇನೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಮಾತಿಗೆ ಬದ್ಧವಾಗಿ ನಿಲ್ಲುವುದಿಲ್ಲ
ಟಿಕೆಟ್ ಸಿಗದಿದ್ದರೆ ಯೋಗೇಶ್ವರ್ ಅತಂತ್ರವಾಗುತ್ತಾರೆ ಎಂದು ಕೇಳಿದಾಗ, “ನಾನು ಅವರ ಪಕ್ಷ ಹಾಗೂ ಎನ್ ಡಿಎ, ಕುಮಾರಸ್ವಾಮಿ, ಯೋಗೇಶ್ವರ್, ದಳದ ವಿಚಾರವಾಗಿ ಮಾತನಾಡುವುದಿಲ್ಲ. ಕಳೆದ ಐದು ವರ್ಷಗಳಿಂದ ಕುಮಾರಸ್ವಾಮಿ ಅವರು ಆಡಿರುವ ಮಾತುಗಳನ್ನು ನೋಡಿಕೊಂಡು ಬನ್ನಿ. ಅವರು ಎಂದಿಗೂ ತಮ್ಮ ಮಾತಿಗೆ ಬದ್ಧವಾಗಿ ನಿಂತಿಲ್ಲ. ಹೀಗಾಗಿ ಅವರ ನಿಲುವಿನ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಸಾರ್ವಜನಿಕವಾಗಿ ಮಾತನಾಡುವುದೇ ಬೇರೆ, ಆಂತರಿಕವಾಗಿ ಮಾತನಾಡುವುದೇ ಬೇರೆ. ಆ ರೀತಿ ಮಾತನಾಡುವುದೇ ಅವರ ತಂತ್ರಗಾರಿಕೆ ಇರಬಹುದು. ಅದಕ್ಕೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನಮ್ಮ ಕಾರ್ಯಕರ್ತರನ್ನು ಕರೆಸಿ ಯಾರೇ ನಿಂತರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಅವರಿಗೆ ಸೂಚನೆ ನೀಡಿದ್ದೇವೆ. ಮುಂದಿನ ಮೂರುವರೆ ವರ್ಷ ಹಾಗೂ ನಂತರದ ಮುಂದಿನ ಸರ್ಕಾರವೂ ನಾವೇ ಅಧಿಕಾರಕ್ಕೆ ಬರುವ ನಿರೀಕ್ಷೆ ಇದ್ದು, ಈ ಅವಧಿಯಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.
ಜೆಡಿಎಸ್ ದುರ್ಬಲ ಎಂದು ಭಾವಿಸಲು ನಾನು ಮೂರ್ಖನಲ್ಲ:
ಜೆಡಿಎಸ್ ಗೆ ಚನ್ನಪಟ್ಟಣದಲ್ಲಿ ಅಭ್ಯರ್ಥಿಯಿಲ್ಲವೇ ಎಂದು ಕೇಳಿದಾಗ, “ಜೆಡಿಎಸ್ ಪಕ್ಷ ದುರ್ಬಲ ಎಂದು ನಾನು ಭಾವಿಸಿದರೆ ನನ್ನಂತ ಮೂರ್ಖ ಇನ್ಯಾರು ಇಲ್ಲ. ಆದರೆ ಕುಮಾರಸ್ವಾಮಿ ಇಷ್ಟು ದುರ್ಬಲರಾಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಕೇಂದ್ರ ಸಚಿವರಾಗಿರುವ ಅವರು ಎಲ್ಲರ ಕೈಕಾಲು ಕಟ್ಟಿಕೊಂಡು ನಮ್ಮ ಚಿಹ್ನೆಯಿಂದ ಸ್ಪರ್ಧೆ ಮಾಡಿ ಎಂದು ಬಿಜೆಪಿಯವರಿಗೆ ಹೇಳುವಷ್ಟು ದುರ್ಬಲರಾಗಿದ್ದಾರೆ ಎಂದು ಭಾವಿಸಿರಲಿಲ್ಲ” ಎಂದು ಲೇವಡಿ ಮಾಡಿದರು.
ಉಪಚುನಾವಣೆ ನಾಮಪತ್ರ ಸಲ್ಲಿಕೆಗೆ ಮೂರ್ನಾಲ್ಕು ದಿನಗಳು ಬಾಕಿ ಇದ್ದು ನಿನ್ನೆ ಸಿಎಂ ಜತೆಗಿನ ಸಭೆ ಬಗ್ಗೆ ಕೇಳಿದಾಗ, “ಸಚಿವರುಗಳ ಜತೆ ಚರ್ಚೆ ಮಾಡಿ ಅಭಿಪ್ರಾಯ ಪಡೆದಿದ್ದೇವೆ. ಚುನಾವಣಾ ಸಮಿತಿ ಸಭೆ ಬದಲು ಚುನಾವಣೆ ಉಸ್ತುವಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಪಕ್ಷದ ಅಭ್ಯರ್ಥಿಗಳ ತೀರ್ಮಾನ ಆಗಿದೆ. ನಾವು ದೆಹಲಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ” ಎಂದು ತಿಳಿಸಿದರು.
ಪ್ರತಿ ಕ್ಷೇತ್ರಕ್ಕೆ ಒಬ್ಬರ ಹೆಸರನ್ನೇ ಹೈಕಮಾಂಡ್ ಗೆ ಕಳುಹಿಸುತ್ತೀರಾ ಎಂದು ಕೇಳಿದಾಗ, “ನಾವು ಒಂದು ಹೆಸರನ್ನು ಕಳುಹಿಸುತ್ತೇವೋ, ಎರಡು ಹೆಸರು ಕಳುಹಿಸುತ್ತೇವೋ, ಅರ್ಜಿ ಹಾಕಿದವರೆಲ್ಲರ ಹೆಸರು ಕಳುಹಿಸುತ್ತೀವೋ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತದೆ
ಬಿಜೆಪಿ- ಜೆಡಿಎಸ್ ಅಲ್ಲಿ ಅನೇಕ ಗೊಂದಲಗಳಿವೆ ಎಂದು ಕೇಳಿದಾಗ, “ಅವರ ನಡುವೆ ಗೊಂದಲಗಳಿರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಚನ್ನಪಟ್ಟಣ ಸ್ವಾಭಾವಿಕವಾಗಿ ಜೆಡಿಎಸ್ ಕ್ಷೇತ್ರ. ಕುಮಾರಸ್ವಾಮಿ ಹಾಲಿ ಕ್ಷೇತ್ರ. ಆದರೆ ಅವರು ಬಿಜೆಪಿಗೆ ಬಿಟ್ಟುಕೊಟ್ಟಿರುವ ಬಗ್ಗೆ ಮಾಧ್ಯಮಗಳ ವರದಿ ಬರುತ್ತಿವೆ. ಈ ಕ್ಷೇತ್ರ ಬಿಟ್ಟುಕೊಟ್ಟರೆ ಅವರು ಪಕ್ಷದ ಅಸ್ಥಿತ್ವ ಕಳೆದುಕೊಂಡಂತಾಗುತ್ತದೆ. ಈಗಾಗಲೇ ಅವರ ಬಾಮೈದರನ್ನು ಬಿಜೆಪಿ ಚಿಹ್ನೆ ಅಡಿ ನಿಲ್ಲಿಸಿದ್ದಾರೆ. ಈಗ ಇದನ್ನೂ ಬಿಟ್ಟುಕೊಟ್ಟರೆ ಅವರು ಅಸ್ಥಿತ್ವ ಕಳೆದುಕೊಳ್ಳುತ್ತಾರೆ. ಇದು ಎಲ್ಲರಿಗೂ ಅರ್ಥವಾಗುವ ವಿಚಾರ. ಇದರಲ್ಲಿ ನಾವ್ಯಾಕೆ ಹಸ್ತಕ್ಷೇಪ ಮಾಡೋಣ?” ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಡಿ.ಕೆ. ಸುರೇಶ್ ಅವರ ಸ್ಪರ್ಧೆಗೆ ಒತ್ತಡ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ, “ಶೇ 80 ರಷ್ಟು ಕಾರ್ಯಕರ್ತರು ಸುರೇಶ್ ಅವರ ಸ್ಪರ್ಧೆಗೆ ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್ ಯಾರನ್ನು ಕಣಕ್ಕಿಳಿಸುತ್ತಾರೆ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದ್ದೇನೆ. ಲೋಕಸಭೆ ಚುನಾವಣೆ ಸೋಲಿನ ಆಘಾತದಿಂದ ನಾವಿನ್ನೂ ಹೊರಗೆ ಬಂದಿಲ್ಲ. ಸುರೇಶ್ ಅಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ. ಕಡಿಮೆ ಅಂತರದಲ್ಲಿ ಸೋತಿದ್ದರೆ ಒಂದು ಪಕ್ಷ ಸುಧಾರಿಸಿಕೊಳ್ಳಬಹುದಿತ್ತು. ಹೀಗಾಗಿ ನಾವು ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೋತ ಮಾತ್ರಕ್ಕೆ ಜನರ ಸೇವೆಯನ್ನು ಬಿಡಲು ಆಗುವುದಿಲ್ಲ” ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಜನ ನಿಮ್ಮ ನಿರೀಕ್ಷೆಗೂ ಮೀರಿ ಮತ ಹಾಕಿದ್ದಾರೆ ಎಂದು ಕೇಳಿದಾಗ, “ಸುರೇಶ್ ಹಗಲಿರುಳು ಕೆಲಸ ಮಾಡಿದ್ದರು. ಈಗ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ವಿಶ್ವಾಸ ನಮಗಿದೆ” ಎಂದು ತಿಳಿಸಿದರು.
ಚನ್ನಪಟ್ಟಣದ ಅಭ್ಯರ್ಥಿ ನಾನೇ ಎನ್ನುತ್ತೀರಿ, ನೀವು ನಿಲ್ಲದಿದ್ದರೆ ನಿಜವಾದ ಅಭ್ಯರ್ಥಿ ಯಾರು ಎಂದು ಕೇಳಿದಾಗ, “ಈಗಲೂ ನಾನೇ ಅಭ್ಯರ್ಥಿ, ಅಭ್ಯರ್ಥಿ ನಾನಲ್ಲ ಎಂದು ಹೇಳಿದವರಾರು?” ಎಂದರು.
ಸಿಬಿಐಗೆ ನನ್ನ ಮೇಲೆ ಬಹಳ ಪ್ರೀತಿ:
ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಕೇಳಿದಾಗ, “ಅವರು ನನ್ನನ್ನು ಬಹಳ ಪ್ರೀತಿಸುತ್ತಾರೆ. ಹೀಗಾಗಿ ನನ್ನನ್ನು ಬಿಡುತ್ತಿಲ್ಲ. ಈ ನೆಲದ ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ. ಈಗಾಗಲೇ ರಾಜ್ಯ ಹೈಕೋರ್ಟ್ ಯತ್ನಾಳ್ ಹಾಗೂ ಸಿಬಿಐ ಅರ್ಜಿಯನ್ನು ವಜಾಗೊಳಿಸಿದೆ. ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾನೂನು ಪ್ರಕ್ರಿಯೆ ನಡೆಯುತ್ತದೆ. ಅವರು ಏನಾದರೂ ಮಾಡಿಕೊಳ್ಳಲಿ. ನನ್ನ ವಿರುದ್ಧ ಈಗಾಗಲೇ ಸಿಬಿಐ ತನಿಖೆ ಮಾಡಿದೆ. ಈಗ ಲೋಕಾಯುಕ್ತ ಸಂಸ್ಥೆ ಕೂಡ ತನಿಖೆ ಮಾಡುತ್ತಿದೆ. ಇನ್ನು 7-8 ವರ್ಷ ಈ ಪ್ರಕ್ರಿಯೆ ನಡೆಯುತ್ತದೆ” ಎಂದು ತಿಳಿಸಿದರು.
ರಾಜಕೀಯವಲ್ಲದೆ ಮತ್ತೇನು?
ಇದು ದ್ವೇಷ ರಾಜಕಾರಣವೇ ಎಂದು ಕೇಳಿದಾಗ, “ರಾಜಕೀಯ ಹೊರತಾಗಿ ಇಲ್ಲಿ ಬೇರೇನಿದೆ? ದೇಶದಲ್ಲಿ ರಾಜಕಾರಣಿ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದ್ದರೆ ಅದು ನನ್ನ ಪ್ರಕರಣ ಮಾತ್ರ. ಅವರು ನನ್ನ ವಿರುದ್ಧ ಎಷ್ಟು ಗಂಭೀರವಾಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಅವರು ಏನು ಬೇಕೋ ಮಾಡಿಕೊಳ್ಳಲಿ. ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದ್ದು, ನ್ಯಾಯಪೀಠದಿಂದ ಅನ್ಯಾಯ ಆಗುವುದಿಲ್ಲ ಎಂದು ನಂಬಿದ್ದೇನೆ. ರಾಜ್ಯ ಸರ್ಕಾರ ಯಾವ ಅಧಿಕಾರದ ಮೇಲೆ ಸಿಬಿಐ ತನಿಖೆಗೆ ಆದೇಶ ನೀಡಿತ್ತೋ, ಅದೇ ಅಧಿಕಾರದ ಮೇಲೆ ರಾಜ್ಯ ಸರ್ಕಾರ ಸಿಬಿಐನಿಂದ ವಿಚಾರಣೆ ಅನುಮತಿ ಹಿಂಪಡೆದಿದೆ. ಲೋಕಾಯುಕ್ತ ಈಗಾಗಲೇ ಇಂತಹ ನೂರಾರು ಪ್ರಕರಣ ತನಿಖೆ ಮಾಡುತ್ತಿದ್ದು, ನನ್ನ ಪ್ರಕರಣವನ್ನು ಅವರೇ ತನಿಖೆ ಮಾಡಲಿದ್ದಾರೆ. ಈ ಪ್ರಕರಣವನ್ನು ಲೋಕಾಯುಕ್ತ ಮಾಡಿದರೂ ಒಂದೇ, ಸಿಬಿಐ ತನಿಖೆ ಮಾಡಿದರೂ ಒಂದೇ. ಆದರೆ ಸರ್ಕಾರ ರಾಜಕೀಯ ಹಿತದೃಷ್ಟಿಯಿಂದ ತನ್ನ ನಿರ್ಧಾರ ಕೈಗೊಂಡಿದೆ” ಎಂದು ತಿಳಿಸಿದರು.
ಮಳೆಹಾನಿ ಪ್ರದೇಶಗಳಿಗೆ ದೀರ್ಘಾವಧಿ ಪರಿಹಾರಕ್ಕೆ ಸಮಿತಿ ರಚನೆ:
ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಆಗಿರುವ ತೊಂದರೆ ಬಗ್ಗೆ ಕೇಳಿದಾಗ, “ಅನೇಕರು ತಗ್ಗು ಪ್ರದೇಶಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, ಭಾರಿ ಪ್ರಮಾಣದ ಮಳೆ ಬಂದಾಗ ಮನೆಗಳಿಗೆ ನೀರುನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಮಳೆ ಬಂದಾಗ ಎಲ್ಲೆಲ್ಲಿ ನೀರು ನಿಲ್ಲುತ್ತದೆ, ಸಮಸ್ಯೆ ಉಂಟಾಗುತ್ತಿದೆ ಆ ಪ್ರದೇಶಗಳಲ್ಲಿ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ನಾವು ಸಮಿತಿ ರಚನೆಗೆ ಮುಂದಾಗಿದ್ದೇವೆ.
ನಗರದ ಯಾವ ಭಾಗಗಳಲ್ಲಿ ಈ ರೀತಿ ಸಮಸ್ಯೆ ಎದುರಾಗುತ್ತಿದೆ ಸಾರ್ವಜನಿಕರು ಕೂಡ ಪಾಲಿಕೆಗೆ ಮಾಹಿತಿ ನೀಡಬೇಕು. ಈ ಬಗ್ಗೆ ಮುಖ್ಯ ಇಂಜಿನಿಯರ್ ಬಗ್ಗೆ ಚರ್ಚೆ ಮಾಡಿದ್ದೇನೆ. ನಿನ್ನೆ ರಾತ್ರಿಯಿಂದ ಬೆಳಗಿನ ಜಾವದ ಜತೆ ಬಿಬಿಎಂಪಿ ನಿಯಂತ್ರಕ ಕೊಠಡಿ ಜತೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆದಿದ್ದೇನೆ. ಇಂದು ಬೆಳಗ್ಗೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಮುಂದಾಗಿದ್ದೆ ಆದರೆ ಬಿಬಿಎಂಪಿ ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿದ್ದು, ಅವರ ಕಾರ್ಯಕ್ಕೆ ಅಡ್ಡಿಪಡಿಸುವುದು ಬೇಡ. ಹೀಗಾಗಿ ಸಂಜೆ ಮೇಲೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ