
ಪ್ರಗತಿವಾಹಿನಿ ಸುದ್ದಿ: “ಅನವಶ್ಯಕ ವಿಚಾರ ಇಟ್ಟುಕೊಂಡು ರಾಜ್ಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿರುವವರೇ ದುಷ್ಟಶಕ್ತಿಗಳು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಾತನಾಡಿದ ಡಿ.ಕೆ.ಶಿವಕುಮಾರ್, ಶುಕ್ರವಾರ ಪತ್ರಿಕೆಗಳಿಗೆ ನೀಡಿರುವ ಸರ್ಕಾರದ ಜಾಹೀರಾತಿನಲ್ಲಿ ದುಷ್ಟಶಕ್ತಿಗಳು ಎಂದು ಹೇಳಿದ್ದು ಆ ದುಷ್ಟಶಕ್ತಿಗಳು ಯಾರು ಎಂದು ಕೇಳಿದಾಗ, ಈ ರೀತಿ ಉತ್ತರಿಸಿದರು. “ದುಃಖವನ್ನು ನಿವಾರಿಸುವ ದುರ್ಗಾ ದೇವಿ, ದುಷ್ಟರನ್ನು ದೂರಮಾಡಿ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಹರಸಲಿ. ನಮ್ಮ ರಾಜ್ಯ ಶಾಂತಿಯ ತೋಟವಾಗಿ ಪರಿವರ್ತನೆ ಆಗಬೇಕೆಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷವೇ ದುಷ್ಟಶಕ್ತಿಗೆ ಪ್ರಚೋದನೆ ನೀಡುತ್ತಿದೆ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ವಿರೋಧ ಪಕ್ಷದವರಿಗೆ ಉತ್ತರ ನೀಡಲು ಬಯಸುವುದಿಲ್ಲ. ಸಕಾರಾತ್ಮಕ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತೇನೆ” ಎಂದು ತಿಳಿಸಿದರು.
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧದ ಪ್ರಕರಣ ಹಿಂಪಡೆದಿರುವ ಬಗ್ಗೆ ಕೇಳಿದಾಗ, “ಬಿಜೆಪಿ ನಾಯಕರ ಮೇಲಿರುವ ಪ್ರಕರಣಗಳನ್ನು ನಾವು ಹಿಂದಕ್ಕೆ ಪಡೆದಿದ್ದೇವೆ. ಈ ಬಗ್ಗೆ ಗೃಹಸಚಿವರು ಹೆಚ್ಚಿನ ಮಾಹಿತಿ ನೀಡುತ್ತಾರೆ” ಎಂದರು.
ಬಿಜೆಪಿ ನಿಲುವೇನು?:
ಜಾತಿ ಗಣತಿ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಬ್ರಿಟೀಷರಂತೆ ಒಡೆದು ಆಳುವ ನೀತಿ ಅನುಸರಿಸುತ್ತಿದೆಯೇ ಎಂದು ಕೇಳಿದಾಗ, “ಜಾತಿ ಗಣತಿ ವಿಚಾರದಲ್ಲಿ ತಮ್ಮ ನಿಲುವೇನು ಎಂದು ಬಿಜೆಪಿ ತಿಳಿಸಲಿ. ಆನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.
ಕಾಂಗ್ರೆಸ್ ನವರು ಸರ್ಕಾರವನ್ನು ಮೋಸದಿಂದ ಸ್ಥಿರಗೊಳಿಸಲು ಹೊರಟಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮುಂದೆ ಚರ್ಚೆ ಮಾಡೋಣ, ದುರ್ಗಾ ಮಾತೇ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ” ಎಂದು ತಿಳಿಸಿದರು.
ಮೈಸೂರು ದಸರಾದಂತೆ ಮಡಿಕೇರಿ ದಸರಾ ಕೂಡ ಖ್ಯಾತಿ ಪಡೆಯಲಿ:
“ನಮ್ಮ ಕೊಡಗಿನ ಸಂಸ್ಕೃತಿಯ ಸಂಕೇತ ಮಡಿಕೇರಿ ದಸರಾಕ್ಕೆ ಚಾಲನೆ ನೀಡಲು ಇಂದು ಮಡಿಕೇರಿಗೆ ಭೇಟಿ ನೀಡಿದ್ದೇನೆ. ಈ ವಿಶೇಷ ಸಂದರ್ಭ ಹಾಗೂ ನಮ್ಮ ಸಂಸ್ಕೃತಿಯ ಸಂಕೇತದ ಆಚರಣೆಗೆ ಪ್ರೋತ್ಸಾಹ ನೀಡಬೇಕು ಎಂದು ಬಂದಿದ್ದೇನೆ.
ಜಿಲ್ಲಾ ನಾಯಕರು ಹಾಗೂ ಕಾರ್ಯಕರ್ತರು ನನಗೆ ಸ್ವಾಗತ ಕೋರಿದ್ದು, ಮೈಸೂರು ದಸರಾ ಮಾದರಿಯಲ್ಲೇ ಮಡಿಕೇರಿ ದಸರಾ ಕೂಡ ಖ್ಯಾತಿ ಪಡೆಯಬೇಕು. ಇದಕ್ಕಾಗಿ ಈ ಭಾಗದ ಜನರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ.
ಮೈಸೂರು ದಸರಾ ಹಾಗೂ ಮಡಿಕೇರಿಗೆ ಮೂರುವರೆ ಲಕ್ಷ ವಾಹನಗಳು ಬಂದಿವೆ ಎಂಬ ಅಂಕಿಅಂಶಗಳು ನಮಗೆ ಲಭ್ಯವಾಗಿವೆ. ಬರಗಾಲ ಹೋಗಿ ಉತ್ತಮ ಮಳೆಯಾಗುತ್ತಿದೆ. ಈ ಬಾರಿ ಕಾಫಿಗೆ ಉತ್ತಮ ಬೆಲೆ ಬಂದಿದೆ.
ಕಾವೇರಿ ತುಂಬಿ ಹರಿಯುತ್ತಿದ್ದು, ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಸೇರಿ ಆ ತಾಯಿಗೆ ಬಾಗಿನ ಅರ್ಪಿಸಿದ್ದೇವೆ’ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ