
ಪ್ರಗತಿವಾಹಿನಿ ಸುದ್ದಿ: ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ದಿನಬೆಳಗಾದರೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರು ಪಕ್ಷಕ್ಕೆ ಅನಿವಾರ್ಯ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರು ಎಲ್ಲಾ ಚುನಾವಣೆಗೂ ಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯ್ತಿ, ವಿಧಾನ ಸಭೆ, ಸಂಸತ್ ಚುನಾವಣೆ ಎಲ್ಲದಕ್ಕೂ ಬೇಕು. ಅವರನ್ನು ಪಕ್ಷ ಎರಡು ಬಾರಿ ಸಿಎಂ ಮಾಡಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದು, ಅವರ ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಗೊಂದಲದ ಹೇಳಿಕೆ ಬೇಡ” ಎಂದು ತಿಳಿಸಿದರು.
ಪಕ್ಷದಲ್ಲಿ ಗೊಂದಲದ ಹೇಳಿಕೆ ಯಾಕೆ ಎಂದು ಕೇಳಿದಾಗ, “ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ದಿನ ನಿತ್ಯ ಎಲ್ಲವನ್ನು ಗಮನಿಸುತ್ತಿದೆ” ಎಂದು ತಿಳಿಸಿದರು.
ಅಧಿಕಾರದಲ್ಲಿದ್ದುಕೊಂಡು ಹೋರಾಟ ಯಾಕೆ ಮಾಡುತ್ತಾರೆ:
ನೀರಾವರಿ ವಿಚಾರವಾಗಿ ಪಕ್ಷಾತೀತ ಹೋರಾಟ ಮಾಡಬೇಕು ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ರಾಜ್ಯದ ನೆಲ, ಜಲ ಹಿತಕ್ಕಾಗಿ ನಾವು ಬದ್ಧವಾಗಿದ್ದೇವೆ. ಅವರು ಮೇಕೆದಾಟಿಗೆ ಒಂದೇ ದಿನದಲ್ಲಿ ಸಹಿ ಹಾಕಿಸುವುದಾಗಿ ಹೇಳಿದ್ದರು. ಮಹದಾಯಿ ವಿಚಾರವಾಗಿ ನಾನೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಇದು ಅವರ ಹೋರಾಟವಲ್ಲ. ರಾಜ್ಯದ ಹೋರಾಟ. ಅವರು ಅಧಿಕಾರದಲ್ಲಿ ಇರುವಾಗ ಹೋರಾಟ ಯಾಕೆ ಮಾಡಬೇಕು? ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನಮಗೆ ಅದರ ಅಗತ್ಯವಿಲ್ಲ. ಅವರಿಗೆ ರಾಜಕಾರಣ ಮಾಡಿ ರೂಢಿ ಇರಬಹುದು. ನಾವು ಹೋರಾಟ ಮಾಡಿದಾಗ ಅವರು ಯಾವ ರೀತಿ ಟೀಕೆ ಮಾಡಿದ್ದಾರೆ ಎಂದು ನೋಡಿದ್ದೇವೆ. ನಾವು ಅದನ್ನು ಮರೆತು ರಾಜ್ಯದ ಹಿತಕ್ಕಾಗಿ ನೀರಾವರಿ ಯೋಜನೆಗೆ ಪ್ರಯತ್ನಿಸುತ್ತೇವೆ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದ್ದೀರಿ, ಅದನ್ನು ಕೊಟ್ಟಿಲ್ಲ ಎಂದು ಅವರು ಸಂಸತ್ತಿನಲ್ಲಿ ಎಂದಾದರೂ ಪ್ರಶ್ನೆ ಮಾಡಿದ್ದಾರಾ? ದೇವೇಗೌಡರು, ಕುಮಾರಸ್ವಾಮಿ, ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆ ಕೆಲಸದಲ್ಲೂ ವಿಫಲರಾಗಿದ್ದಾರೆ. ಮೊದಲು ಈ ಕೆಲಸ ಮಾಡಲಿ. ಕಾವೇರಿ ಗೋದಾವರಿ ಜೋಡಣೆ ಮಾಡಿದರೆ ಸಂತೋಷ. ಅವರು ಯೋಜನೆ ತರಲಿ. ನಮ್ಮಿಂದ ಯಾವ ಸಹಕಾರ ಬೇಕು ಹೇಳಲಿ, ನಾವು ನೀಡುತ್ತೇವೆ. ಇಲ್ಲಿಂದಲೇ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇವೆ” ಎಂದರು.
ಬೆಂಗಳೂರಿನ ನೀರಿನ ವಿಚಾರವಾಗಿ ಮಾತನಾಡಿದ್ದಾರೆ ಎಂದು ಕೇಳಿದಾಗ, “ಅವರ ಪಕ್ಷದ ನಾಯಕರಿಂದ ಗೊಂದಲದ ಹೇಳಿಕೆ ಕೊಡಿಸುತ್ತಿದ್ದಾರೆ. ಡಿ.ಸಿ ತಮ್ಮಣ್ಣ ಅವರಿಗೆ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಡಿಪಿಆರ್ ಸಿದ್ಧಪಡಿಸಿದ್ದಾರೆ ಅಷ್ಟೇ. ಇನ್ನು ತೀರ್ಮಾನ ಮಾಡಿಲ್ಲ. ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಬೆಂಗಳೂರಿಗೆ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ