*ಇದು ರಾಜ್ಯಕ್ಕೆ ಮಾತ್ರವಲ್ಲ; ಇಡೀ ರಾಷ್ಟ್ರಕ್ಕೆ ರವಾನಿಸಿದ ಸಂದೇಶ; ಐತಿಹಾಸಿಕ ದಾಖಲೆಯ ಗೆಲುವಿಗೆ ಆಭಾರಿ ಎಂದ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ರಾಮನಗರ: ರಾಮನಗರ ಜಿಲ್ಲೆಯ ಎಲ್ಲಾ ಮತದಾರರಿಗೆ ಸಾಷ್ಟಾಂಗ ನಮಸ್ಕಾರ. ನನ್ನ ಮೇಲೆ, ನಮ್ಮ ಅಭ್ಯರ್ಥಿ ಹಾಗೂ ಮುಖಂಡರ ಮೇಲೆ ನಂಬಿಕೆ ಇಟ್ಟು ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೀರಿ. ನನಗೆ 1,22,392 ಮತಗಳ ಅಂತರದಲ್ಲಿ, ರಾಮನಗರ ಕ್ಷೇತ್ರದ ಅಭ್ಯರ್ಥಿಯನ್ನು 10,715 ಗೆಲ್ಲಿಸಿದ್ದಾರೆ. ಬಾಲಕೃಷ್ಣ ಅವರನ್ನು 12,648 ಮಂತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದು ಕೇವಲ ನಮ್ಮ ಮೂವರ ವಿಜಯವಲ್ಲ. ರಾಮನಗರ ಜಿಲ್ಲೆ, ಕಾರ್ಯಕರ್ತರ ಗೆಲುವು. ಅಧಿಕಾರಿ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕನಕಪುರ ಗೆದ್ದರೆ ನಾಯಕರಾಗುವುದಿಲ್ಲ ಎಂದು ಅನೇಕರು ಮಾತನಾಡುತ್ತಿದ್ದರು. ಈ ಭಾಗದಲ್ಲಿ ಕೆಲವರು ಬಹಳ ಕೀಳಾಗಿ ಮಾತನಾಡುತ್ತಿದ್ದರು. ನಾನು ಅವರ ಹೆಸರು ಹೇಳುವುದಿಲ್ಲ. ಜಿಲ್ಲೆಯ ಜನ ಅವರಿಗೆ ಉತ್ತರ ನೀಡಿದ್ದಾರೆ. ನೀವು ತೋರಿದ ಪ್ರೀತಿ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ. ನೀವು ಕೊಟ್ಟಿರುವ ಅವಕಾಶದಲ್ಲಿ, ನಾವು ಕೆಲಸ ಮಾಡಿಕೊಂಡು ಹೋಗುತ್ತೇವೆ. ಕಾಂಗ್ರೆಸ್ ಜಯ, ಜನರ ಜಯವಾಗಿದೆ.
40 ವರ್ಷಗಳ ರಾಜಕಾರಣದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ಈ ದಿನ ನೀವವು ಕೊಟ್ಟಿರುವ ಬೆಂಬಲವನ್ನು ನಾವು ಮರೆಯುವುದಿಲ್ಲ. ಇದು ನನ್ನ ಜಯವಲ್ಲ. ಇದು ರಾಮನಗರ ಜಿಲ್ಲೆ ಮತದಾರರ ಜಯ. ಮಹಿಳೆಯರು, ಯುವಕರು, ಹಿರಿಯರ ಧನ್ಯವಾದಗಳು. ರಾಜ್ಯದಲ್ಲಿ ನನ್ನನ್ನು ಅತಿ ಹೆಚ್ಚು ಅಂತರದಲ್ಲಿ ಗೆಲ್ಲಿಸಿದ್ದೀರಿ. ನನ್ನ ಜತೆಗೆ ರಾಮನಗರದಲ್ಲಿ ಇಕ್ಬಾಲ್ ಹುಸೇನ್, ಮಾಗಡಿಯಲ್ಲಿ ಬಾಲಕೃಷ್ಣ ಅವರನ್ನು ಗೆಲ್ಲಿಸಿದ್ದೀರಿ.
ಜನರ ಮುಂದೆ ನಾವು ಸಾಲಗಾರರಾಗಿದ್ದೇವೆ. ಅವರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಬೇಕು. ನಾವು ನುಡಿದಂತೆ ನಡೆಯುತ್ತೇವೆ. ಈ ಗೆಲುವನ್ನು ಶಾಂತಿಯುತವಾಗಿ ಅಭಿನಂದನೆ ಸಲ್ಲಿಸಿ ಸಂಭ್ರಮಾಚರಣೆ ಮಾಡಬೇಕು. ಎಲ್ಲೂ ಗಲಾಟೆ ಮಾಡಬಾರದು. ಅದನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ನಮ್ಮ ಅಣ್ಣ ತಮ್ಮಂದಿರ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಕೊಟ್ಟಿರುವ ಭರವೆಸೆಗಳನ್ನು ಈಡೇರಿಸುವ ಮೂಲಕ ಜನರ ವಿಶ್ವಾಸ ಗೆಲ್ಲಬೇಕು. ಕಾಂಗ್ರೆಸ್ ಗೆ ಮತ ದೇಶಕ್ಕೆ ಹಿತ. ನಿಮ್ಮ ಮತದ ಮೂಲಕ ರಾಷ್ಟ್ರಕ್ಕೆ ಸಂದೇಶ ರವಾನಿಸಿದ್ದೀರಿ. ನಿಮ್ಮ ಪ್ರತಿ ಬೆವರಿನ ಹನಿ, ಪ್ರಾರ್ಥನೆ, ನನಗೆ ಕೊಟ್ಟ ಪ್ರೀತಿ, ವಿಶ್ವಾಸವನ್ನು ಉತ್ತರವಾಗಿ ನೀಡಿದ್ದೀರಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ