*ದ್ವೇಷದ ರಾಜಕಾರಣಕ್ಕೆ ದಾರಿಯಾಗಬಾರದು ಎಂದು ಸಿಬಿಐ ಮುಕ್ತ ತನಿಖೆ ಅಧಿಕಾರ ಹಿಂದಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ*

ಪ್ರಗತಿವಾಹಿನಿ ಸುದ್ದಿ: “ದ್ವೇಷದ ರಾಜಕಾರಣಕ್ಕೆ ದಾರಿ ಆಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ ನೀಡಿದ್ದ ಮುಕ್ತ ಅನುಮತಿ ಅಧಿಕಾರವನ್ನು ಹಿಂದಕ್ಕೆ ತೆಗದುಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸಿಬಿಐ ಮುಕ್ತ ತನಿಖೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿರುವ ಬಗ್ಗೆ ಬಿಜೆಪಿ ಟೀಕೆಯ ಬಗ್ಗೆ ಕೇಳಿದಾಗ ಹೀಗೆ ಉತ್ತರಿಸಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಉತ್ತರಿಸಿದ ಅವರು, “ಗಂಭೀರ ಪ್ರಕರಣಗಳು ಎದುರಾದಾಗ ನಮ್ಮ ಅಧಿಕಾರಿಗಳು ತನಿಖೆಗೆ ಸೂಕ್ತರಲ್ಲ ಎನ್ನುವ ಅಭಿಪ್ರಾಯ ಬಂದರೆ, ಆ ವೇಳೆ ಸಿಬಿಐಗೆ ನೀಡುವ ಬಗ್ಗೆ ಚಿಂತನೆ ಮಾಡುತ್ತೇವೆ” ಎಂದರು.
ಕಾಂಗ್ರೆಸ್ ಬ್ಯೂರೋ ಏಜೆನ್ಸಿ ಎಂದವರು ಯಾರು?
“ಸಿಬಿಐ ಬಗ್ಗೆ ಜನತಾದಳದ ದೇವೇಗೌಡರು, ಕುಮಾರಸ್ವಾಮಿ ಏನು ಮಾತನಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೋ ಆಫ್ ಏಜೆನ್ಸಿ ಎಂದು ಕರೆದಿದ್ದರು. ಸಿಬಿಐಗೆ ಯಾವ, ಯಾವ ಪ್ರಕರಣಗಳನ್ನು ನೀಡಲಾಗಿತ್ತು. ಅವುಗಳು ಏನಾಗಿವೆ, ಐಎಂಎ ಪ್ರಕರಣ ಏನಾಗಿದೆ ಎಂಬುದರ ಬಗ್ಗೆ ನಾನು ಚರ್ಚಿಸುವುದಿಲ್ಲ” ಎಂದು ಹೇಳಿದರು.
ಸಿದ್ದರಾಮಯ್ಯ ಅವರ ರಕ್ಷಣೆಗೆ ಹಾಗೂ ಸಿಬಿಐ ತನಿಖೆ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ವಿರೋಧ ಪಕ್ಷದವರು ಮಾತನಾಡಿಕೊಳ್ಳಲಿ, ಇದರ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡೋಣ” ಎಂದರು.
ನನ್ನ ಕಚೇರಿಗೆ ಡಿನೋಟಿಫಿಕೇಷನ್ ಕಡತ ಬಂದಿತ್ತು
ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ನಿರ್ಣಯದ ಬಗ್ಗೆ ಕೇಳಿದಾಗ, “ಅನೇಕ ವಿಚಾರಗಳನ್ನು ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಗಮನಕ್ಕೆ ತರದೇ ತೀರ್ಮಾನ ಮಾಡಲು ಆಗುತ್ತದೆಯೇ? ಆದ ಕಾರಣ ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ತೀರ್ಮಾನ ತಗೆದುಕೊಂಡಿದ್ದೇವೆ.
ನನಗೂ ನೀತಿ, ನಿಯಮಗಳ ಬಗ್ಗೆ ಸ್ವಲ್ಪ ತಿಳುವಳಿಕೆಯಿದೆ. ನಾನು ವಿದ್ಯಾವಂತ, ಬುದ್ದಿವಂತ ಅಲ್ಲದಿದ್ದರೂ ಪ್ರಜ್ಞಾವಂತಿಕೆ ಹೊಂದಿದ್ದೇನೆ. ಪ್ರತಿಯೊಂದಕ್ಕೂ ನಿಯಮವಿರುತ್ತದೆ. ರಾಜ್ಯಪಾಲರ ಕಚೇರಿಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಉತ್ತರ ಹೋಗಬೇಕು.
ನನ್ನ ಕಚೇರಿಗೆ ಕೆಲವು ದಿನಗಳ ಹಿಂದೆ ಡಿನೋಟಿಫಿಕೇಷನ್ ಅಥವಾ ರೀಡೂ ಸಂಬಂಧಪಟ್ಟ ಕಡತ ಬಂದಿತ್ತು. ನನ್ನ ಕಾರ್ಯದರ್ಶಿ ನನಗೆ ಕಳುಹಿಸಿದ್ದರು. ಇದಕ್ಕೆ ನಾನು, “ಬೇರೆಯವರಿಗೆ ಉತ್ತರ ಕೊಡಲು ಆಗುವುದಿಲ್ಲ. ಕ್ಯಾಬಿನೆಟ್ ನಲ್ಲಿ ಈ ಹಿಂದೆ ತೀರ್ಮಾನವಾದಂತೆ, ಈ ಕುರಿತು ಸಂಪುಟ ಉಪ ಸಮಿತಿ ರಚನೆಯಾಗಿದೆ, ಅಲ್ಲಿಗೆ ಕಳುಹಿಸಿ ಎಂದೆ” ಎಂದರು.
ರಾಜಭವನದ ಆಂತರಿಕ ವಿಚಾರ ನನಗೆ ಗೊತ್ತಿಲ್ಲ
ರಾಜಭವನದಿಂದ ಮಾಹಿತಿ ಸೋರಿಕೆ ಬಗ್ಗೆ ಬಿಜೆಪಿ ಆರೋಪದ ಮಾಡುತ್ತಿದೆ ಎಂದಾಗ, “ಇದು ರಾಜಭವನದ ಆಂತರಿಕ ವಿಚಾರ. ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಲೋಕಾಯುಕ್ತ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿಯಿಲ್ಲ” ಎಂದರು.
ಸಿಎಂ ವಿರುದ್ಧ ಎಫ್ ಐಆರ್ ದಾಖಲಾದರೆ ಪಕ್ಷಕ್ಕೆ ಮುಜುಗರವಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, “ಯಾವ ಮುಜುಗರವೂ ಆಗುವುದಿಲ್ಲ” ಎಂದು ಚುಟುಕಾಗಿ ಉತ್ತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ