*ನಾಟಕ ರಂಗಕ್ಕೆ ಡಿ.ಎಸ್. ಚೌಗಲೆ ಕೊಡುಗೆ ಅಪಾರ: ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾಟಕ ರಂಗದಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ.ಎಸ್. ಚೌಗಲೆಯವರು ನಾಟಕ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕನ್ನಡ ಭವನದ ರಂಗಮಂದಿರದಲ್ಲಿ ಡಿ.ಎಸ್. ಚೌಗಲೆ ಅವರ ರಚನೆಯ ಹಾಗೂ ಶೈಲಜಾ ಎ.ಎಸ್. ಅಭಿನಯದ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ನಾಟಕವನ್ನು ಉದ್ಘಾಟಿಸಿ, ವೀಕ್ಷಿಸಿ ಅವರು ಮಾತನಾಡಿದರು.
ಕಳೆದ 20, 30 ವರ್ಷಗಳ ಹಿಂದೆ ನಾಟಕಗಳು ಬಹಳಷ್ಟು ಪ್ರಖ್ಯಾತಿ ಪಡೆದಿದ್ದವು, ಆದರೆ ಪ್ರಸ್ತುತ ದಿನಗಳಲ್ಲಿ ನಾಟಕಗಳ ಪ್ರಾಮುಖ್ಯತೆ ಕಡಿಮೆಯಾಗಿದೆ. ಆದರೂ ಡಿ.ಎಸ್. ಚೌಗಲೆ ಅವರು ಛಲ ಬಿಡದೆ ರಾಜ್ಯಾದ್ಯಂತ್ಯ ತಮ್ಮ ನಾಟಕಗಳನ್ನು ಪ್ರದರ್ಶಿಸಿ, ಯುವ ಜನತೆಗೆ ಇತಿಹಾಸ ತಿಳಿಸುತ್ತಿದ್ದಾರೆಂದು ಶ್ಘಾಘಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ನಾಟಕ ಪ್ರದರ್ಶನ ಮಾಡಿದರೆ ಕೆಲವರಿಗೆ ಅಷ್ಟೇ ನಾಟಕ ವೀಕ್ಷಣೆಗೆ ಅವಕಾಶ ಸಿಗುತ್ತದೆ. ಕಾರಣ ತಾಲೂಕು, ಹೊಬಳಿ ಮಟ್ಟದಲ್ಲಿ ನಿಮ್ಮ ನಾಟಕಗಳನ್ನು ಪ್ರದರ್ಶಸಿ, ಅದರೊಂದಿಗೆ ಸಾವಿತ್ರಿಬಾಯಿ ಫುಲೆ ನಾಟಕವನ್ನು ಬೀದಿ ಬೀದಿಗಳಲ್ಲಿ ಪ್ರದರ್ಶನ ಮಾಡಿದರೆ ಎಲ್ಲರೂ ನಾಟಕಗಳನ್ನು ವೀಕ್ಷಿಸಿ, ಇತಿಹಾಸ ತಿಳಿದುಕೊಳ್ಳುತ್ತಾರೆಂದು ಸಲಹೆ ನೀಡಿದರು.
ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ದೇಶದ ಎಲ್ಲ ಮಹಿಳೆಯರ ಅಕ್ಷರ ತಾಯಿ. ಅವರ ಬಗ್ಗೆ ಎಲ್ಲ ಅರಿತುಕೊಳ್ಳಬೇಕು. ಅಕ್ಷರ ದಾನವು ಬಹುದೊಡ್ಡ ಪುಣ್ಯದ ಕೆಲಸ. ಅವಮಾನ, ವಿರೋಧಗಳು ಬಂದರೂ ಸಾಕ್ಷರತೆಯ ಕೆಲಸವನ್ನು ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಸಾಧನೆಯನ್ನು ಎಲ್ಲರಿಗೂ ತಿಳಿಸಬೇಕೆಂದರು.
ದೇಶದಲ್ಲಿ ನಮ್ಮನ್ನು ಮೇಲೆತ್ತಲು, ನಮ್ಮ ಉದ್ಧಾರಕ್ಕಾಗಿ ಶ್ರಮಿಸಿದವರನ್ನು ಮರೆಯುತ್ತಿದ್ದು, ನಮ್ಮನ್ನು ತುಳಿದವರನ್ನು ಪೂಜಿಸುತ್ತಿದ್ದು, ಅವರನ್ನೇ ಆದರ್ಶವಾಗಿಟ್ಟುಕೊಂಡಿದ್ದೇವೆ, ನಮ್ಮ ಏಳ್ಗೆಗೆ ಶ್ರಮಿಸಿದ ಸಾವಿತ್ರಿಬಾಯಿ ಫುಲೆ, ಡಾ. ಬಿ.ಆರ್. ಅಂಬೇಡ್ಕರ್ ಅವರಂತ ಮಹಾತ್ಮರನ್ನು ಒಂದೆ ಜಾತಿಗೆ ಸೀಮಿತ ಮಾಡಿದ್ದಾರೆ. ಹೀಗಾಗಿ ನಮ್ಮ ಮಕ್ಕಳಿಗೆ ಇತಿಹಾಸ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೌಶಾದ್ ಬಿಜಾಪುರ, ಡಾ. ಯಲ್ಲಪ್ಪ ಹಿಮ್ಮಡಿ, ಶಿವನಗೌಡ ಪಾಟೀಲ, ಪ್ರೊ.ಎ.ಎ. ಘೋರ್ಪಡೆ, ಸುಭಾಷ್ ಏಣಗಿ, ಗಿರೀಷ ಜೋಶಿ, ಡಾ. ಸರಜೂ ಕಾಟ್ಕರ್, ಡಾ. ಅಶೋಕ ಗೋಧಿ, ಡಾ. ಉಮೇಶ ಹರಕುಣಿ ಸೇರಿದಂತೆ 200 ಕ್ಕೂ ಹೆಚ್ಚು ಪ್ರೇಕ್ಷಕರು ಭಾಗಿಯಾಗಿದ್ದರು. ಡಿ. ಎಸ್. ಚೌಗಲೆಯವರ ಎರಡು ದಿನಗಳ ಮಹಿಳಾ ಸಂವೇದನೆಯ ನಾಟಕೋತ್ಸವ ಯಶಸ್ವಿಯಾಗಿ ಸಮಾಪ್ತಿಗೊಂಡಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ