Karnataka NewsLatestPolitics

*BREAKING: ವಿಜಯೇಂದ್ರ ಬಗ್ಗೆ ಮಾಜಿ ಸಿಎಂ ಓರ್ವರ ಆಡಿಯೋ ವೈರಲ್: ಬಿಜೆಪಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಸಂಭಾಷಣೆ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಕುರಿತು ಮಾಜಿ ಮುಖ್ಯಮಂತ್ರಿಯೊಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ರಾಜ್ಯ ಬಿಜೆಪಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಕೇಂದ್ರದ ನಾಯಕರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಆಡಿಯೋದಲ್ಲಿ ವಿಜಯೇಂದ್ರ ಅವರನ್ನು ಸ್ಥಾನದಿಂದ ಕಿತ್ತಾಕಬೇಕು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ಮುಂದುವರೆಯಲು ಬಿಡಿ, ಬಳಿಕ ಅಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕಿ. ಈಗಲೇ ಕಿತ್ತು ಹಾಕಿದರೆ ಬಿಜೆಪಿ ಮತ್ತೆ ಲಿಂಗಾಯಿತ ವಿರೋಧಿ ಅಂತಾಗುತ್ತೆ. ಹಾಗಾಗಿ ಕಾದು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು ಎಂದಿದ್ದಾರೆ. ಈ ಆಡಿಯೋ ಇದೀಗ ರಾಜ್ಯ ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈಗಾಗಲೇ ರಾಜ್ಯಾಅಧ್ಯಕ್ಷ ವಿಜಯೇಂದ್ರ ಬದಲಾವಣೆ ಬಗ್ಗೆ ಬಿಜೆಪಿ ಹಿರಿಯ ನಾಯಕರು ಒತ್ತಾಯಿಸಿದ್ದರು, ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಮುರುಗೇಶ್ ನಿರಾಣಿ ಕೂಡ ವಿಜಯೇಂದ್ರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದರು. ಇದರ ಬೆನ್ನಲ್ಲೇ ಇದೀಗ ಡಿ.ವಿ.ಸದಾಅನಂದಗೌಡ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ವಿ.ಸದಾನಂದಗೌಡ, ನಾನು ಅಂತಹ ಮಾತುಗಳನ್ನು ಆಡಿಲ್ಲ. ಆ ಆಡಿಯೋ ನನ್ನದಲ್ಲ. ನನ್ನದಲ್ಲದ ಆಡೀಯೋ, ವಿಡಿಯೋಗಳಿಗೆ ನಾನ್ಯಾಕೆ ಪ್ರತಿಕ್ರಿಯಿಸಲಿ? ತನಿಖೆ ನಡೆದದು ಈ ಬಗ್ಗೆ ಸತ್ಯಾಸತ್ಯತೆ ಹೊರಬಲಿ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button