Film & EntertainmentKannada NewsKarnataka NewsLatest

*ಮಗನ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ವಿಶೇಷ ಗಿಫ್ಟ್ ಕೊಟ್ಟ ದರ್ಶನ್*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಈ ಬಾರಿ ಮಗ ವಿನೀಶ್ ಅವರ 18ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಸಾಧ್ಯವಾಗಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿಯಾಗಲು ಮಗ ವಿನೀಶ್ ಆಗಮಿಸಿದ್ದರು. 18ನೇ ವಯಸ್ಸಿಗೆ ಕಾಲಿಟ್ಟ ಮಗನನ್ನು ಕಂಡ ತಂದೆ ಭಾವುಕರಾಗಿದ್ದಾರೆ. ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಜೈಲಿನಲ್ಲಿ ತಮಗೆ ಲಭ್ಯವಿದ್ದ ಚಾಕೊಲೇಟ್‌ವೊಂದನ್ನೇ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ.

ವಿನೀಶ್ ಜೊತೆಗೆ ಸಂಬಂಧಿ ಸುಹಾಸ್ ಕೂಡ ದರ್ಶನ್ ಅವರನ್ನು ಭೇಟಿಯಾಗಲು ಬಂದಿದ್ದರು. ಮಗನಿಗೆ ದರ್ಶನ್ ಕಿಟ್‌ಕ್ಯಾಟ್ ಚಾಕೊಲೇಟ್ ನೀಡಿ ಆಶೀರ್ವದಿಸಿದ್ದಾರೆ. ತಂದೆಯಿಂದ ಸಿಕ್ಕ ಈ ಸರಳ ಉಡುಗೊರೆ ವಿನೀಶ್ ಅವರನ್ನು ಭಾವುಕರನ್ನಾಗಿಸಿದೆ. ಈ ಘಟನೆ ದರ್ಶನ್ ಅಭಿಮಾನಿಗಳ ಗಮನ ಸೆಳೆದಿದ್ದು, ತಂದೆ-ಮಗನ ಭಾವನಾತ್ಮಕ ಕ್ಷಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ತಂದೆ ನೀಡಿದ ಉಡುಗೊರೆಯ ಬಗ್ಗೆ ವಿನೀಶ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. “ಈ ಪ್ರಪಂಚದಲ್ಲಿ ನನ್ನ ಅಪ್ಪ ಕೊಟ್ಟ ಈ ಗಿಫ್ಟ್‌ಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ” ಎಂದು ಬರೆದುಕೊಂಡಿದ್ದಾರೆ.

ಈ ವೇಳೆ ಮಗನಿಗೆ ದರ್ಶನ್ ಕಿವಿಮಾತನ್ನೂ ಹೇಳಿದ್ದಾರೆ ಎನ್ನಲಾಗಿದೆ. “ಈಗ ನೀನು ಟಿನೇಜ್‌ಗೆ ಕಾಲಿಟ್ಟಿದ್ದೀಯಾ. ಇನ್ಮುಂದೆ ನಿನ್ನ ಬಗ್ಗೆ ಯಾವುದೇ ದೂರುಗಳು ಅಥವಾ ಕಂಪ್ಲೇಂಟ್‌ಗಳು ಬರಬಾರದು. ಜವಾಬ್ದಾರಿಯಿಂದ ನಡೆದುಕೋ” ಎಂದು ಸಲಹೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ಅವರ ಕುಟುಂಬ ಹಲವು ಬೆಳವಣಿಗೆಗಳನ್ನು ಎದುರಿಸುತ್ತಿದೆ. ಇದೀಗ ನಟನ ಆಪ್ತರಾಗಿದ್ದ ಧನ್ವೀರ್ ಜೊತೆಗಿನ ವಿವಾದವೂ ಚರ್ಚೆಗೆ ಬಂದಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ದೂರು ದಾಖಲಿಸಿದ್ದರೆ, ಧನ್ವೀರ್ ತಂದೆ ಕೂಡ ಪ್ರತಿ ದೂರು ದಾಖಲಿಸಿದ್ದಾರೆ. ಈ ಬೆಳವಣಿಗೆಗಳು ದರ್ಶನ್ ಕುಟುಂಬದ ಆತಂಕವನ್ನು ಹೆಚ್ಚಿಸಿವೆ.

Related Articles

Back to top button