Latest

ಹೆತ್ತಮ್ಮನನ್ನೇ ಕತ್ತು ಸೀಳಿ ಕೊಂದ ಮಗಳು

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ – ಅನೈತಿಕ ಸಂಬಂಧವನ್ನು ವಿರೋಧ ಮಾಡುತ್ತಿದ್ದ ಕಾರಣ ಹೆತ್ತ ತಾಯಿಯನ್ನೇ ಮಗಳೊಬ್ಬಳು ಕತ್ತು ಸೀಳಿ ಕೊಲೆ ಮಾಡಿದ ಘಟನೆ ದಕ್ಷಿಣ ದೆಹಲಿಯ ಮದಂಗೀರ್‌ನಲ್ಲಿ ನಡೆದಿದೆ. ಸುಧಾ ರಾಣಿ (೫೫) ಕೊಲೆಯಾದ ನತದೃಷ್ಟ ತಾಯಿ. ದೇವಯಾನಿ (೨೪) ಕೊಲೆ ಮಾಡಿದ ಪಾತಕಿ ಮಗಳಾಗಿದ್ದಾಳೆ.

ಪೊಲೀಸ್ ವಿಚಾರಣೆಯಲ್ಲಿ ಹೊರ ಬಿದ್ದ ಸತ್ಯ

ಫೆ.೧೯ರಂದು ಪೊಲೀಸರಿಗೆ ಕರೆ ಮಾಡಿದ್ದ ದೇವಯಾನಿ, ತಮ್ಮ ಮನೆಗೆ ಇಬ್ಬರು ಮುಸುಕುಧಾರಿಗಳು ನುಗ್ಗಿ ಹಣ ಮತ್ತು ಆಭರಣಗಳನ್ನು ದೋಚಿದ್ದಾರೆ. ತನ್ನ ತಾಯಿ ಸುಧಾರಾಣಿ ಕತ್ತಿನಲ್ಲಿದ್ದ ಸರವನ್ನು ಕಳ್ಳರು ಎಳೆಯಲು ಹೋದಾಗ ತಾಯಿ ವಿರೋಧಿಸಿದ್ದು ಕಳ್ಳರು ಮತ್ತು ತಾಯಿಯ ನಡುವೆ ಘರ್ಷಣೆಯಾಗಿದೆ. ಈ ವೇಳೆ ಕಳ್ಳರು ತಾಯಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ದೂರಿದ್ದಳು.

ಆದರೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಸುಧಾರಾಣಿ ಅವರ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತಾದರೂ ಘರ್ಷಣೆ ಸಂಭವಿಸಿದ ಯಾವುದೇ ಕುರುಹುಗಳು ಇರಲಿಲ್ಲ. ಅಲ್ಲದೇ ದೇವಯಾನಿ ಪದೇ ಪದೆ ಹೇಳಿಕೆಗಳನ್ನು ಬದಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೇವಯಾನಿಯ ಮೇಲೆಯೇ ಅನುಮಾನ ಹೆಚ್ಚಾಗಿದೆ. ನಿರಂತರ ವಿಚಾರಣೆಯ ಬಳಿಕ ದೇವಯಾನಿ ತಾನೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಅನೈತಿಕ ಸಂಬಂಧ ವಿರೋಧಿಸಿದ್ದೇ ಕಾರಣ

ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಡಿಸಿಪಿ ಬೆನಿಟಾ ಮೇರಿ ಜೈಕರ್, ದೇವಯಾನಿಯನ್ನು ಗ್ರೇಟರ್ ನೋಯ್ಡಾದ ವ್ಯಕ್ತಿಯೊಬ್ಬನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ೪ ವರ್ಷದ ಮಗನೂ ಇದ್ದಾನೆ. ಆದರೆ ದೇವಯಾನಿ ಶಿಬೂ ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಪತಿಯನ್ನು ತೊರೆದಿದ್ದಳು.

ಇದನ್ನು ತಾಯಿ ಸುಧಾರಾಣಿ ತೀವ್ರವಾಗಿ ವಿರೋಧಿಸಿದ್ದರು. ಶಿಬೂನನ್ನು ಬಿಟ್ಟು ಗಂಡನೊಂದಿಗೆ ಸಂಸಾರ ಮಾಡುವಂತೆ ಬುದ್ದಿ ಹೇಳಿದ್ದಳು. ಅಲ್ಲದೇ ಇತ್ತೀಚೆಗೆ ದೇವಯಾನಿಗೆ ಹಣ ಕೊಡುವುದನ್ನು ಸಹ ತಾಯಿ ಸುಧಾರಾಣಿ ನಿಲ್ಲಿಸಿದ್ದಳು. ಇದರಿಂದ ಸಿಟ್ಟಾಗಿದ್ದ ದೇವಯಾನಿ ತಾಯಿಯನ್ನೇ ಕೊಲೆ ಮಾಡಲು ನಿರ್ಧರಿಸಿದಳು.

ಚಹಾದಲ್ಲಿ ನಿದ್ರೆ ಮಾತ್ರೆ

ದೇವಯಾನಿಯು ತನ್ನ ತಾಯಿಗೆ ಚಹಾ ಮಾಡಿಕೊಟ್ಟು ಅದರಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಳು. ಸುಧಾರಾಣಿ ನಿದ್ದೆಗೆ ಜಾರುತ್ತಿದ್ದಂತೆ, ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಕೊಲೆಯ ಕೃತ್ಯಕ್ಕೆ ಶಿಬೂನ ಗೆಳೆಯ ಕಾರ್ತಿಕ್ ಎಂಬುವವನು ಸಹಾಯ ಮಾಡಿದ್ದ, ಈತ ಕೂಡ ದೇವಯಾನಿಯೆಡೆಗೆ ಆಕರ್ಷಿತನಾಗಿದ್ದ. ಹಾಗಾಗಿ ಕೊಲೆಗೆ ಸಹಕಾರ ನೀಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದೆ ಏನಾಗುತ್ತೆ ಎಂಬುದಕ್ಕೆ ಇದು ಟ್ರಯಲ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button