Kannada NewsKarnataka NewsLatest

*ಭವಿಷ್ಯದ ನಗರ ಬೆಂಗಳೂರಿಗೆ ಬನ್ನಿ, ಬಂಡವಾಳ ಹೂಡಿಕೆ ಮಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್*

ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಉದ್ಯಮಿಗಳಿಗೆ ಡಿಸಿಎಂ ಆಹ್ವಾನ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಭವಿಷ್ಯದ ನಗರ. ಇಲ್ಲಿನ ಹವಾಗುಣ, ಸಂಸ್ಕೃತಿ, ಮಾನವ ಸಂಪನ್ಮೂಲ ಅತ್ಯುತ್ತಮವಾಗಿದೆ. ವಿಶ್ವದ ಅನೇಕ ಕಂಪನಿಗಳು ಇಲ್ಲಿ ಕೆಲಸ ಮಾಡಿ ಬೆಳೆಯುತ್ತಿವೆ. ನೀವೆಲ್ಲರೂ ಬೆಂಗಳೂರಿಗೆ ಬನ್ನಿ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಶ್ವದ ಉದ್ಯಮಿಗಳಿಗೆ ಆಹ್ವಾನ ನೀಡಿದರು.

ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬುಧವಾರ ಮಾತನಾಡಿದರು.

“ಬೆಂಗಳೂರಿನಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವಿದ್ದು, ವಿಶ್ವದ ಪ್ರತಿಷ್ಠಿತ 500 ಕಂಪನಿಗಳು ಬೆಂಗಳೂರಿನಲ್ಲಿವೆ. ಏರೋಸ್ಪೆಸ್, ಐಟಿ, ಮೆಡಿಕಲ್ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಇಲ್ಲಿನ ಮಾನವ ಸಂಪನ್ಮೂಲ ಕೌಶಲ್ಯ ಹೊಂದಿದೆ. ಕರ್ನಾಟಕದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು, ಪ್ರತಿವರ್ಷ 1.50 ಲಕ್ಷ ಆರೋಗ್ಯ ಕ್ಷೇತ್ರದ ಸಿಬ್ಬಂದಿ ತಯಾರಾಗುತ್ತಿದ್ದಾರೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಎಲ್ಲರೂ ಒಟ್ಟಾಗಿ ಸೇರಿ ಪ್ರಗತಿಯತ್ತ ಸಾಗೋಣ” ಎಂದು ತಿಳಿಸಿದರು.

Home add -Advt

“ಭಾರತ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರತಿಭಾವಂತರ ದೇಶ. ನಮ್ಮ ದೇಶ ಮುಂದಿನ 25 ವರ್ಷಗಳಿಗೆ ತಯಾರಿ ನಡೆಸುತ್ತಿದೆ. ನಾನು ಬೆಂಗಳೂರಿನಿಂದ ಬಂದಿದ್ದು, ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ” ಎಂದು ಹೇಳಿದರು.

“ಬೆಂಗಳೂರು ಏಷ್ಯಾದ ಐಟಿ ರಾಜಧಾನಿಯಾಗಿದೆ. ಭಾರತದಲ್ಲಿ ನಗರಗಳಲ್ಲಿನ ಜನಸಂಖ್ಯೆ ಸುಮಾರು 40%ಗೆ ತಲುಪಿದ್ದು, ಮುಂದಿನ 25 ವರ್ಷಗಳಲ್ಲಿ 50%ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಇದಕ್ಕೆ ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ವಿವರಿಸಿದರು.

“ಜಾಗತಿಕ ಐಟಿ ರಾಜಧಾನಿ ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದಾರೆ. ಇದು ಬೆಂಗಳೂರಿನ ಶಕ್ತಿ. ವಿಶ್ವದ ನಾಯಕರು ಹಾಗೂ ಉದ್ಯಮಿಗಳು ಬೆಂಗಳೂರಿನತ್ತ ಆಕರ್ಷಿತರಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಸಂಚಾರ ಹಾಗೂ ಮೂಲಭೂತ ಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ” ಎಂದು ತಿಳಿಸಿದರು.

“ಮುಂದಿನ ವರ್ಷದ ವೇಳೆಗೆ ಬೆಂಗಳೂರಿನಲ್ಲಿ ಮೆಟ್ರೋ ಸಂಪರ್ಕ 153 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇನ್ನು ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಬಸ್ ವ್ಯವಸ್ಥೆ ಅತ್ಯುತ್ತಮವಾಗಿದೆ. 6000 ಬಸ್ ಗಳು ಬೆಂಗಳೂರಿನಲ್ಲಿದ್ದು, ಇದರಲ್ಲಿ 2500 ಎಲೆಕ್ಟ್ರಿಕ್ ಬಸ್ ಗಳು ಇವೆ. ಕರ್ನಾಟಕದಲ್ಲಿ ದಕ್ಷ ಆಡಳಿತವಿದ್ದು, ಎಲ್ಲಾ ರೀತಿಯ ಸಹಕಾರ ನೀಡಲಾಗುವುದು” ಎಂದರು.

“ಕರ್ನಾಟಕದಲ್ಲಿ ಬೆಂಗಳೂರಿನ ಜತೆಗೆ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲೂ ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ನಾವು 2045ರ ಗುರಿ ಇಟ್ಟುಕೊಂಡು ಇಡೀ ರಾಜ್ಯದಲ್ಲಿ ಸಾರಿಗೆ ಸಂಪರ್ಕ ಅಭಿವೃದ್ಧಿಪಡಿಸಲಾಗುತ್ತಿದೆ” ಎಂದು ತಿಳಿಸಿದರು.

Related Articles

Back to top button