Latest

ಕೊರೋನಾ ಸಂಕಷ್ಟದಲ್ಲೇ ಗ್ರಾಮ ಪಂಚಾಯಿತಿಯಿಂದ ಹಗಲು ದರೋಡೆ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಇಡೀ ವಿಶ್ವವೇ ಕೊರೋನಾ ಸಂಕಷ್ಟದಲ್ಲಿದೆ. ಜನರು ಆರ್ಥಿಕ ನಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಸರಕಾರವೂ ಜನರಿಗೆ ಸಹಾಯ ಮಾಡಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ.

ಆದರೆ ಇಲ್ಲೊಂದು ಗ್ರಾಮ ಪಂಚಾಯಿತಿ ಜನರಿಂದ ಹಗಲು ದರೋಡೆಗಿಳಿದಿದೆ. ಶಿರಸಿ ತಾಲೂಕಿನ ಶಿವಳ್ಳಿ (ಹೆಗಡೆಕಟ್ಟಾ) ಗ್ರಾಮ ಪಂಚಾಯಿತಿ ಇದೇ ಸಮಯವೆಂದು ಸಿಕ್ಕಷ್ಟು ಹಣ ವಸೂಲಿ ಮಾಡುವುದರಲ್ಲಿ ನಿರತವಾಗಿದೆ.

ಲಾಕ್ ಡೌನ್ ನ್ನೇ ನೆಪವಾಗಿಸಿಕೊಂಡು ಜನರಿಗೆ ಆಸ್ಪತ್ರೆ ಸೇರಿದಂತೆ ಅವಶ್ಯಕ ಕೆಲಸಗಳಿಗಾಗಿ ತೆರಳುವುದಕ್ಕೆ ಅನುಮತಿ ಪತ್ರ ನೀಡಲು ಹಣ ವಸೂಲಿ ಮಾಡುತ್ತಿದೆ. ಪ್ರತಿ ಪಾಸ್ ಗೆ 100 ರೂ. ಪಡೆಯಲಾಗುತ್ತಿದೆ.

ಈ ಸಂಬಂಧ ಹಲವಾರು ಜನರು ಪ್ರಗತಿವಾಹಿನಿಗೆ ದೂರು ನೀಡಿದ್ದಾರೆ. ಕೇವಲ ಅವಶ್ಯಕ ಸೇವೆಗಳಿಗಾಗಿ ಮಾತ್ರ ಪಾಸ್ ನೀಡಲು ಗ್ರಾಮ ಪಂಚಾಯಿತಿಗೆ ಅಧಿಕಾರವಿದೆ. ಅದನ್ನೂ ಉಚಿತವಾಗಿ ನೀಡಬೇಕು. ಆದರೆ ಈ ಗ್ರಾಮ ಪಂಚಾಯಿತಿ ಪ್ರತಿ ಪಾಸ್ ನೀಡಲು 100 ರೂ. ಪಡೆಯುತ್ತಿದೆ. ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ಸಾಧ್ಯವಾದಷ್ಟು ನೆರವು ನೀಡುವ ಬದಲು ಈ ರೀತಿ ಅವರಿಂದಲೇ ಹಣ ವಸೂಲಿ ಮಾಡುತ್ತಿರುವುದಕ್ಕೆ ಎಲ್ಲರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಶಿವಳ್ಳಿ ಗ್ರಾಮ ಪಂಚಾಯಿತಿಯ ಈ ಕ್ರಮದ ಕುರಿತು ಪ್ರಗತಿವಾಹಿನಿ ಕಾರವಾರ ಜಿಲ್ಲಾ ಪಂಚಾಯಿತಿ ಸಿಇಒ ಎಂ. ರೋಶನ್ ಅವರಲ್ಲಿ ವಿಚಾರಿಸಿದಾಗ, ಪಾಸ್ ನೀಡಲು ಯಾವುದೇ ರೀತಿಯ ಹಣ ಪಡೆಯಬಾರದು. ಈ ಸಂಬಂಧ ಯಾರೇ ದೂರು ನೀಡಿದರು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಶಿರಸಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಅವರನ್ನು ಪ್ರಶ್ನಿಸಿದಾಗ, ಜನರಿಗೆ ಸಹಾಯ ಮಾಡಲೆಂದೇ ನಾವು ಔಷಧ, ಪೆಟ್ರೋಲ್, ಡಿಸೆಲ್ ಸೇರಿದಂತೆ ವಸ್ತುಗಳನ್ನು ಹಳ್ಳಿಗಳಲ್ಲೇ ಪೂರೈಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕೇವಲ ಅತ್ಯವಶ್ಯಕ ಸೇವೆಗಳಿಗಾಗಿ ನಗರಕ್ಕೆ ಬರಲು ಗ್ರಾಮ ಪಂಚಾಯಿತಿ ಪಾಸ್ ಕೊಡಬಹುದು. ಆದರೆ ಅದಕ್ಕಾಗಿ ಹಣ ಪಡೆಯುವುದು ಅಕ್ರಮ. ಆ ರೀತಿಯ ಹಣ ತೆಗೆದುಕೊಂಡರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರಗತಿವಾಹಿನಿ ದಾಖಲೆ ಸಹಿತ ವರದಿ ಮುಂದಿಟ್ಟಿದೆ. ಈ ವರದಿಯ ಆಧಾರದ ಮೇಲೆ ಸಂಬಂಧಿಸಿದ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

 

ಪಾಸ್ ನೀಡಲು ಹಣ ಪಡೆಯುವುದಕ್ಕೆ ಅವಕಾಶವಿಲ್ಲ. ಈ ಬಗ್ಗೆ ದೂರು ನೀಡಿದರೆ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು

ಎಂ.ರೋಶನ್, ಜಿಪಂ ಸಿಇಒ

 

 ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು ಸರಕಾರ ಮತ್ತು ಗ್ರಾಮ ಪಂಚಾಯಿತಿಗಳ ಕರ್ತವ್ಯ., ಅದನ್ನು ಬಿಟ್ಟು ಪಾಸ್ ನೀಡಲು ಯಾರಿಂದಲೂ ಹಣ ಪಡೆಯುವಂತಿಲ್ಲ. ಹಾಗೊಮ್ಮೆ ಅಕ್ರಮವಾಗಿ ಹಣ ಪಡೆದರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

-ಗೋಪಾಲಕೃಷ್ಣ ನಾಯಕ,

ಶಿರಸಿ ಡಿವೈಎಸ್ಪಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button