ಪ್ರಗತಿವಾಹಿನಿ ಸುದ್ದಿ : ಮನುಕುಲದ ವಿಕಾಸಕ್ಕೆ ಪೂರಕವಾದ ಉತ್ಕೃಷ್ಟ ಜೀವನ ವಿಧಾನವನ್ನು ಹೊಂದಿರುವ ಜನಪರ ಮೌಲ್ಯಗಳ ಮೇರು ದಾರ್ಶನಿಕ ಕೃತಿ ಶ್ರೀಸಿದ್ಧಾಂತ ಶಿಖಾಮಣಿಯು ಕೇವಲ ವೀರಶೈವರಿಗಷ್ಟೇ ಸೀಮಿತವಾಗದೇ ಸಮಷ್ಟಿಯ ಆಶಯಗಳಲ್ಲಿ ಸರ್ವರಿಂದಲೂ ಸ್ವೀಕೃತವಾಗಿದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಸೋಮವಾರ ಮಹಾರಾಷ್ಟ್ರದ ಸೊಲ್ಲಾಪೂರ ನಗರದಲ್ಲಿ ಜರುಗಿದ ಜನಜಾಗೃತಿ ಭಾವೈಕ್ಯ ಧರ್ಮ ಸಮಾವೇಶದಲ್ಲಿ ಧಾರವಾಡದ ಕವಿತಾ ಗುರುಸಿದ್ಧಯ್ಯ ಹಿರೇಮಠ ಅವರಿಗೆ ಕಾಶಿ ಜಗದ್ಗುರು ಪೀಠದಿಂದ ಕೊಡಮಾಡುವ ‘ಶ್ರೀಮತಿ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ನಾಲ್ಕೂ ವೇದಗಳ ಸಾರವೇ ‘ಶ್ರೀರುದ್ರ’ವಾಗಿದೆ. ಜೊತೆಗೆ ಶ್ರೀಸಿದ್ಧಾಂತ ಶಿಖಾಮಣಿಯು 28 ಶಿವಾಗಮಗಳ ಸಾರವಾಗಿದೆ. ಭಾರತೀಯ ಪ್ರಾಚೀನ ಸಂಸ್ಕೃತಿಯ ಮೂಲ ವಾಙ್ಮಯ ವಿಹಾರದಲ್ಲಿ ಶ್ರೀರುದ್ರ ಹಾಗೂ ಸಿದ್ಧಾಂತ ಶಿಖಾಮಣಿ ಪರಿಗಣಿತವಾಗಿದ್ದು, ಇವೆರಡನ್ನೂ ಭಾರತದ ವಿವಿಧ ರಾಜ್ಯಗಳ ಜನಮನಕ್ಕೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಮನಕ್ಕೆ ಮುಟ್ಟಿಸುವಲ್ಲಿ ಸಾಮಾನ್ಯ ಕುಟುಂಬದವರಾದ ಧಾರವಾಡದ ಕವಿತಾ ಹಿರೇಮಠ ಅವರ ಫಲಾಪೇಕ್ಷೆ ರಹಿತ ಸ್ಮರಣೀಯ ಸೇವೆಯನ್ನು ಕಾಶಿ ಪೀಠವು ಪರಿಗಣಿಸಿ ಅವರಿಗೆ ಈ ಪುರಸ್ಕಾರ ನೀಡಿ ಆಶೀರ್ವದಿಸಿದೆ ಎಂದರು.
ಪುಣ್ಯ ಪ್ರಾಪ್ತಿ
ಒಂದು ಬಾರಿ ಶ್ರೀರುದ್ರವನ್ನು ಪಠಣ ಮಾಡಿದರೆ ನಾಲ್ಕೂ ವೇದಗಳನ್ನು ಪಠಣ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಇಂತಹ ಪರಮ ಶಕ್ತಿಸಂಚಯವನ್ನು ಹೊಂದಿರುವ ಶ್ರೀರುದ್ರವನ್ನು ಸ್ವರಯುಕ್ತವಾಗಿ ಪಠಣ ಮಾಡಲು, ಜೊತೆಗೆ ಶ್ರೀಸಿದ್ಧಾಂತ ಶಿಖಾಮಣಿಯನ್ನು ಶಾಸ್ತ್ರಬದ್ಧವಾಗಿ ಪಠಣ ಮಾಡಲು ಹಲವು ರಾಜ್ಯಗಳ ಮಹಿಳೆಯರನ್ನು ಅಣಿಗೊಳಿಸಿ ಅವರ ಮನದಲ್ಲಿ ಶ್ರೀರುದ್ರ ಮತ್ತು ಶ್ರೀಸಿದ್ಧಾಂತ ಶಿಖಾಮಣಿಯನ್ನು ಉಳಿಸಿದ ಶ್ರೇಯಸ್ಸು ಕವಿತಾ ಹಿರೇಮಠ ಅವರಿಗೆ ಸಲ್ಲುತ್ತದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಶ್ಲಾಘಿಸಿದರು.
1 ಲಕ್ಷ ನಗದು ಪುರಸ್ಕಾರ
ಕಾಶಿ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮಹಾರಾಷ್ಟ್ರದ ಖ್ಯಾತ ಉದ್ಯಮಿ ಬಾಬಾಸಾಹೇಬ ಕಲ್ಯಾಣಿ ಅವರ ಧರ್ಮಪತ್ನಿ ಸುನಿತಾ ಕಲ್ಯಾಣಿ ಅವರು ತಮ್ಮ ಮಾತೋಶ್ರೀ ದಿವಂಗತ ಮಾಲತಿ ಮಹಾರುದ್ರಪ್ಪ ಖೇಣಿ ಅವರ ಹೆಸರಿನಲ್ಲಿ 1 ಲಕ್ಷ ನಗದು ಪುರಸ್ಕಾರ ನೀಡಿ, ಪೀಠದ ಉಭಯ ಜಗದ್ಗುರುಗಳ ಕೃಪಾಕಾರುಣ್ಯಕ್ಕೆ ಪಾತ್ರರಾಗಿದ್ದಾರೆ ಎಂದರು.
ನಾಗಣಸೂರದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಲಾತೂರಿನ ಶ್ರೀಓಂಕಾರಸಿದ್ಧ ಶಿವಾಚಾರ್ಯ ಸ್ವಾಮೀಜಿ, ಮೈಂದರಗಿ ಶಿವಾಚಾರ್ಯ ಸ್ವಾಮೀಜಿ, ಪುಣೆ ನಗರದ ಉದ್ಯಮಿ ಧರ್ಮರಾಜ ಖೇಣಿ, ಸುನಿತಾ ಕಲ್ಯಾಣಿ, ಮಾಜಿ ಶಾಸಕ ವಿಶ್ವನಾಥ ಚಾಕೋತಿ, ಧರ್ಮರಾಜ ಕಾಡಾದಿ, ಪ್ರೊ. ಅನಿಲ ಸರ್ಜೆ, ಪ್ರೊ. ರೇವಣಸಿದ್ಧ ಸಾಬಾದಿ, ರೇವಣಸಿದ್ಧ ವಾಡಕರ, ಮಹಾಹೇಶ್ವರ ಮಂಡಳದ ಎಲ್ಲಾ ಸದಸ್ಯರು ಇದ್ದರು. ಇದೇ ಸಂದರ್ಭದಲ್ಲಿ ಕವಿತಾ ಹಿರೇಮಠ ಹಾಗೂ ಅವರ ಸ್ತ್ರೀಶಕ್ತಿ ಬಳಗದ ಸದಸ್ಯರು ಶಿವಸ್ತುತಿ ಮತ್ತು ಶಕ್ತಿ ಸ್ತುತಿಗಳನ್ನು ಪ್ರಸ್ತುತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ