
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚಿಸುವವರ ಸಂಖ್ಯೆ ಜೋರಾಗಿದೆ. ಬೆಸ್ಕಾಂ ಸಿಬ್ಬಂದಿಯೊಬ್ಬರು ಹಣ ಕಳೆದುಕೊಂಡು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಕೆ ಹಾಕಿ ವಂಚಕರು ಲಕ್ಷ ಲಕ್ಷ ಹಣ ದೋಚಿದ್ದು, ಮನನೊಂದ ಬೆಸ್ಕಾಂ ಸಿಬ್ಬಂದಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
42 ವರ್ಷದ ಕುಮಾರ್ ಆತ್ಮಹತ್ಯೆಗೆ ಶರಣಾದವರು. ಕುಮಾರ್ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಬೆಸ್ಕಾಂ ಸಿಬ್ಬಂದಿಯಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ವಿಕ್ರಂ ಗೋಸ್ವಾಮಿ ಎಂಬಾತ ವಿಡಿಯೋ ಕರೆ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಸಿದ್ದು, ಕೇಸ್ ನಿಂದ ಕೈಬಿಡಲು ಅಕೌಂಟ್ ಗೆ ಹಣ ಹಾಕಬೇಕು ಎಂದು ಹೇಳಿ 11 ಲಕ್ಷ ಹಣ ತನ್ನ ಅಕೌಂಟ್ ಗೆ ಹಾಕಿಸಿಕೊಂಡಿದ್ದಾನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.