ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪಶುವೈದ್ಯೆ ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಎನ್ ಕೌಂಟರ್ ಪ್ರಕರಣ ನಕಲಿ ಎಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಆಯೋಗ ವರದಿ ನೀಡಿದೆ.
2019ರಲ್ಲಿ ಹೈದರಾಬಾದ್ ನಲ್ಲಿ ನಡೆದಿದ್ದ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್ ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಆದರೆ ಇದೊಂದು ಫೇಕ್ ಎನ್ ಕೌಂಟರ್ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ನೇಮಕ ಮಾಡಿತ್ತು.
ಇಂದು ಸುಪ್ರೀಂಕೋರ್ಟ್ ಗೆ ಆಯೋಗ ವರದಿ ಸಲ್ಲಿಸಿದ್ದು, ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ತತ್ನಿಸಿರಲಿಲ್ಲ. ಕಾನೂನು ಬಾಹಿರವಾಗಿ ಆರೋಪಿಗಳನ್ನು ಪೊಲೀಸರೆ ಹತ್ಯೆ ಮಾಡಿದ್ದಾರೆ. ಇದೊಂದು ನಕಲಿ ಎನ್ ಕೌಂಟರ್ ಎಂದು ವರದಿ ನೀಡಿದೆ.
ಪೊಲೀಸರಿಂದ ಹತ್ಯೆಗೀಡಾದ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತ ವಯಸ್ಕರರಾಗಿದ್ದಾರೆ ಎಂದು ವರದಿ ಹೇಳಿದೆ.
ತೆಲಂಗಾಣ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು, ವರದಿಯನ್ನು ಗೌಪ್ಯವಾಗಿಡಬೇಕು ಎಂದು ಸುಪ್ರೀಂ ಕೋರ್ಟ್ ಸಿಜೆಐ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಗೌಪ್ಯವಾಗಿಡುವ ಅಗತ್ಯವಿಲ್ಲ. ತಪ್ಪಿತಸ್ಥರು ಯಾರೆಂಬುದು ಗೊತ್ತಾಗಿದೆ. ಈಗ ರಾಜ್ಯವು ಈ ಬಗ್ಗೆ ಪರಿಶೀಲಿಸಬೇಕಾಗಿದೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.
ಇಂದು ನಡೆದ ವಿಚಾರಣೆ ವೇಳೆ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದ ವಿಸಿ ಸಜ್ಜನರ್ ಕೂಡ ಹಾಜರಾಗಿದ್ದರು. ಸಧ್ಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ಹೈಕೋರ್ಟ್ ಗೆ ವರ್ಗಾವಣೆ ಮಾಡಿದ್ದು, ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದ ಪೊಲಿಸರಿಗೆ ಆತಂಕ ಎದುರಾಗಿದೆ.
ಲೈಂಗಿಕ ಕಿರುಕುಳ; ನಟ ವಿಜಯ್ ಬಾಬು ಪಾಸ್ ಪೋರ್ಟ್ ಮುಟ್ಟುಗೋಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ