ಜಿಲ್ಲಾ ಸ್ವೀಪ್ ಸಮಿತಿ; ಬೋಟಿಂಗ್ ಮುಖಾಂತರ ಮತದಾನ ಜಾಗೃತಿ
ಪ್ರತಿಯಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೋಟೆ ಕೆರೆಯಲ್ಲಿ (ಕಿಲ್ಲಾ ಕೆರೆ) ಮಂಗಳವಾರ (ಏ.23) ಬೋಟಿಂಗ್ ಮುಖಾಂತರ ಏರ್ಪಡಿಸಲಾದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಚಿಕ್ಕೋಡಿ, ಬೆಳಗಾವಿ ಲೋಕಸಭಾ ಮತ ಕ್ಷೇತ್ರಗಳ ಚುನಾವಣೆ ಮೇ.07 ರಂದು ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನದ ಸಮಯ ನಿಗದಿ ಪಡಿಸಲಾಗಿದೆ. ಎಲ್ಲ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಹೇಳಿದರು.
ಭಾರತ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿ ಮತದಾರರು ಚಲಾಯಿಸಬೇಕು. ಈಗಾಗಲೇ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಬಹಳಷ್ಟು ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರಗಳಲ್ಲಿ ಮತದಾರರ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಮತ ನಮ್ಮ ಹಕ್ಕು, ಎರಡು ಮತ ಕ್ಷೇತ್ರದ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ದೇಶ ಕಟ್ಟುವಲ್ಲಿ ಪಾತ್ರ ವಹಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ಶಿಂಧೆ ಅವರು ತಿಳಿಸಿದರು.
ಮತದಾನ ಜಾಗೃತಿ ಫಲಕ ಪ್ರದರ್ಶನ:
ಚುನಾವಣೆ ಪರ್ವ ದೇಶದ ಗರ್ವ, ಮತದಾನ ನಿಮ್ಮ ಹಕ್ಕು ಹಾಗೂ ನಿಮ್ಮ ಜವಾಬ್ದಾರಿ, ನೈತಿಕ ಮತದಾನ ಮಾಡಿ, ನನ್ನ ಮತ ನನ್ನ ಹಕ್ಕು, ನಿಮ್ಮ ಮತ ನಿಮ್ಮ ಭವಿಷ್ಯ, ಮತ ಚಲಾವಣೆ ನಿಮ್ಮ ಹಕ್ಕು, ನಿಮ್ಮ ಮತ ಅಮೂಲ್ಯ ತಪ್ಪದೇ ಮತ ಚಲಾಯಿಸಿ ಎಂಬ ವಿವಿಧ ಜಾಗೃತಿ ಫಲಕಗಳನ್ನು ಬೋಟಿಂಗ್ ಮೂಲಕ ಪ್ರದರ್ಶಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ, ಯೋಜನಾ ನಿರ್ದೇಶಕ ಕೃಷ್ಣರಾಜು, ಲೆಕ್ಕಾಧಿಕಾರಿ ಗಂಗಾ ಹಿರೇಮಠ್, ಮಹಾನಗರ ಪಾಲಿಕೆ ಸಿಬ್ಬಂದಿಗಳು, ಪೌರ ಕಾರ್ಮಿಕರು, ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು, ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ