
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಂದಿನ ಸುತ್ತೋಲೆ ಹೊರಡಿಸುವವರೆಗೆ ಶಾಲೆಗಳಿಗೆ ಪ್ರವೇಶ ಆರಂಭಿಸಬೇಡಿ ಎಂದು ರಾಜ್ಯದ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಟ್ಟಪ್ಪಣೆ ಮಾಡಿದೆ.
ಸರಕಾರಿ, ಅರೆ ಸರಕಾರಿ, ಖಾಸಗಿ ಸೇರಿದಂತೆ ಎಲ್ಲ ಶಾಲೆಗಳಿಗೂ ಸಧ್ಯಕ್ಕೆ ಪ್ರವೇಶ ಪ್ರಕ್ರಿಯೆ ಆರಂಭಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಈಗ ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿಕ್ಷಣ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಆದರೆ ಕೆಲವು ಶಾಲೆಗಳು ಮಾರ್ಚ್ 31ರೊಳಗೆ ಪ್ರವೇಶ ಪಡೆಯುವಂತೆ ಪಾಲಕರನ್ನು ಒತ್ತಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಈಗ ಪಾಲಕರನ್ನು ಶಾಲೆಗಳಿಗೆ ಕರೆಸುವುದಾಗಲಿ, ಶಾಲೆಗಳನ್ನು ತೆರೆಯುವುದಾಗಲಿ ಅಪರಾಧ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
2020 -2021ನೇ ಸಾಲಿನ ಪ್ರವೇಶ ಪ್ರಕ್ರಿಯೆ ಸಂಬಂಧ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು. ಆ ನಂತರವಷ್ಟೆ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಈಗ ಪ್ರವೇಶ ಆರಂಭಿಸುವುದು ಹಾಗೂ ಪಾಲಕರನ್ನು ಒತ್ತಾಯಿಸುವುದು ತಪ್ಪು. ಹಾಗೆ ಮಾಡಿದೆ ಶಾಲೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.